ಜನವಸತಿ ಪ್ರದೇಶದಲ್ಲಿ ಕಂದಕಕ್ಕೆ ಉರುಳಿದ ಗ್ಯಾಸ್ ಟ್ಯಾಂಕರ್ ಹೊನ್ನಾವರದಲ್ಲಿ ಆತಂಕ

Gas tanker accident
Published on

ಹೊನ್ನಾವರ: ರಾಷ್ಟ್ರೀಯ ಹೆದ್ದಾರಿ 66 ರ ಬದಿಯಲ್ಲಿ ನಿಲ್ಲಿಸಿಟ್ಟ ಗ್ಯಾಸ್ ಟ್ಯಾಂಕರ್ ನಿಯಂತ್ರಣ ತಪ್ಪಿ ಸುಮಾರು 20 ಅಡಿಗಳ ಆಳದ ತಗ್ಗು ಪ್ರದೇಶಕ್ಕೆ ಬಿದ್ದ ಘಟನೆ ಪಟ್ಟಣದ ಕರ್ನಲ್ ಕಂಬದ ಎದುರು ಶನಿವಾರ ರಾತ್ರಿ 7 ಗಂಟೆ ಸುಮಾರಿಗೆ ನಡೆದಿದೆ.
ಮಂಗಳೂರು ಕಡೆಯಿಂದ ಕುಮಟಾ ಕಡೆಗೆ ಸಾಗುತ್ತಿದ್ದ ಗ್ಯಾಸ್ ಟ್ಯಾಂಕರ್‌ನ್ನು ಚಾಲಕನು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿಟ್ಟು ಸಮೀಪದ ಅಂಗಡಿಗೆ ಚಹಾ ಕುಡಿಯಲು ಹೋಗಿದ್ದನು. ವಾಹನವು ಪಕ್ಕದ ಇಳಿಜಾರಿನಲ್ಲಿ ಪಲ್ಟಿಯಾಗಿದೆ. ಪಲ್ಟಿಯಾದ ಟ್ಯಾಂಕರ್ ತಗ್ಗು ಪ್ರದೇಶದಲ್ಲಿ ಇರುವ ಪ್ರಭಾಕರ ಕುಂಜಪ್ಪ ಆಚಾರಿ ಎಂಬುವವರ ಮನೆಯ ಗೋಡೆಗೆ ತಾಗಿ ಬಿದ್ದಿದೆ. ತಜ್ಞರು ಆಗಮಿಸಿ ಪರಿಶೀಲನೆ ನಡೆಸಿ ಗ್ಯಾಸ್ ಸೋರಿಕೆ ಆಗದಿರುವ ಕುರಿತು ಮಾಹಿತಿ ನೀಡಿದರು.
ಕೆಲಕಾಲ ಸಂಚಾರದಲ್ಲಿಯೂ ಅಸ್ತವ್ಯಸ್ತ ಉಂಟಾಯಿತು. ಗ್ಯಾಸ್ ಟ್ಯಾಂಕರ್ ಕೆಳಗೆ ಬೀಳುವಾಗ ಹೆದ್ದಾರಿ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ವಾಲಿದ್ದು ವಿದ್ಯುತ್ ತಂತಿ ಹಾಳಾಗಿದೆ. ಇದರಿಂದಾಗಿ ಪಟ್ಟಣದಲ್ಲಿ ಸುಮಾರು ಎರಡು ತಾಸುಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಯಿತು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಹೊನ್ನಾವರ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಹೆಸ್ಕಾಂ ಸಿಬ್ಬಂದಿ ಆಗಮಿಸಿ ಕ್ರಮ ಕೈಗೊಂಡರು. ಚಾಲಕನ ಬೇಜವಾಬ್ದಾರಿತನದಿಂದ ದೊಡ್ಡ ಅನಾಹುತ ಉಂಟಾಗಿ ಆತಂಕದ ವಾತಾವರಣ ನಿರ್ಮಾಣವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net