ಗಂಗೊಳ್ಳಿ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿನಂತೆ ಪರಿಸರ ಸ್ವಚ್ಛತೆ ಬಗ್ಗೆ ಪಾಠ ಹೇಳುವ ಆರೋಗ್ಯ ಇಲಾಖೆ, ತಮ್ಮ ವಠಾರ ಶುಚಿಯಾಗಿಡಲು ಕಸವನ್ನು ಸಾರ್ವಜನಿಕ ಸ್ಥಳದಲ್ಲಿ ಎಸೆದಿರುವುದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.
ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಬುಧವಾರ ಸ್ವಚ್ಛಗೊಳಿಸಿದ್ದು, ತೆಗೆದ ಗಿಡಗಂಟಿಗಳನ್ನು ಪಕ್ಕದಲ್ಲಿರುವ ರಥಬೀದಿಯ ಸಾರ್ವಜನಿಕ ಸ್ಥಳದಲ್ಲಿ ಎಸೆಯಲಾಗಿದೆ. ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಪ್ರತಿನಿತ್ಯ ನೂರಾರು ಭಕ್ತರು ಆಗಮಿಸುತ್ತಿದ್ದು, ದೇವಸ್ಥಾನಕ್ಕೆ ಬರುವ ರಥಬೀದಿಯಲ್ಲಿ ಆರೋಗ್ಯ ಕೇಂದ್ರ ಗಿಡಗಂಟಿ ಎಸೆದಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ರಥಬೀದಿಯಲ್ಲಿ ಸ್ವಚ್ಛತೆ ಹಾಗೂ ಪಾವಿತ್ರೃ ಕಾಪಾಡುವ ಉದ್ದೇಶದಿಂದ ರಥಬೀದಿಯಲ್ಲಿ ಅನೇಕ ಬಾರಿ ಸ್ವಚ್ಛತೆ ಮಾಡಲಾಗಿದ್ದು, ತ್ಯಾಜ್ಯ ಎಸೆಯುತ್ತಿರುವವರಿಗೂ ಎಚ್ಚರಿಕೆ ನೀಡಲಾಗಿತ್ತು. ರಥಬೀದಿಯಲ್ಲಿ ತ್ಯಾಜ್ಯ ವಿಲೇವಾರಿ ಹೆಚ್ಚುತ್ತಿರುವುದನ್ನು ಗಮನಿಸಿದ ಸ್ಥಳೀಯಾಡಳಿತ ಈ ವಠಾರದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದೆ. ಇದರಿಂದ ತ್ಯಾಜ್ಯ ವಿಲೇವಾರಿ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಆದರೆ ಇದೀಗ ಆರೋಗ್ಯ ಇಲಾಖೆಯವರೇ ಸಾರ್ವಜನಿಕ ಸ್ಥಳದಲ್ಲಿ ಬಿಸಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.