

ಬೆಂಗಳೂರು: ಒಂದೇ ಒಂದು ಮೋಷನ್ ಪೋಸ್ಟರ್ ಮೂಲಕ ಒಂದಷ್ಟು ಬಗೆಯ ಚರ್ಚೆ ಮತ್ತು ಕುತೂಹಲ ಹುಟ್ಟುಹಾಕಿದ್ದ `ಕೆಂಡ' ಸಿನಿಮಾ. ಈ ಹಿಂದೆ `ಗಂಟುಮೂಟೆ' ಎಂಬ ಭಿನ್ನ ಕಥಾನಕದ ಮೂಲಕ ಸೆಳೆದಿದ್ದ ತಂಡವೇ ಕೆಂಡದ ರೂವಾರಿಯಾಗಿರುವುದು ವಿಶೇಷ.
'ಗಂಟುಮೂಟೆ' ಮೂಲಕ ಬೆರಗೊಂದನ್ನು ತೆರೆದಿಟ್ಟಿದ್ದ ರೂಪಾ ರಾವ್, ನಿರ್ಮಾಣದಲ್ಲಿಯೂ ಭಾಗಿಯಾಗಿದ್ದ ಸಹದೇವ್ ಕೆಲವಡಿ ಅವರೊಂದಿಗೆ ಒಟ್ಟುಗೂಡಿ 'ಕೆಂಡ' ಸಿನಿಮಾವನ್ನು ರೂಪಿಸಿದ್ದಾರೆ. ಈ ಮೂಲಕ ಛಾಯಾಗ್ರಾಹಕ ಸಹದೇವ್ ಕೆಲವಡಿ ನಿರ್ದೇಶಕರಾಗಿಯೂ ಬಡ್ತಿ ಪಡೆದುಕೊಂಡಿದ್ದಾರೆ.
ಮೋಷನ್ ಪೋಸ್ಟರ್ ಮತ್ತು ಅದರ ಸಲುವಾಗಿ ಚಿತ್ರತಂಡ ಹಂಚಿಕೊಂಡಿದ್ದ ಒಂದಷ್ಟು ವಿವರಗಳಿಂದಾಗಿಯೇ 'ಕೆಂಡ' ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಇದೀಗ ಚಿತ್ರತಂಡ ತಮ್ಮ ಒಡಲಲ್ಲಿರುವ ವಿಭಿನ್ನವಾದ ಒಂದಷ್ಟು ಪಾತ್ರಗಳನ್ನು ಪರಿಚಯ ಮಾಡಿಸಿದೆ. ಒಂದು ವಿಡಿಯೋ ಮೂಲಕ ಕೆಂಡದೊಳಗಿನ ಪಾತ್ರಗಳು ಅನಾವರಣಗೊಳಿಸಿದೆ.
ಅಂದಹಾಗೆ ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ಈ ಚಿತ್ರ ನಿರ್ಮಾಣಗೊಂಡಿದೆ. ಕೆಂಡ ಚಿತ್ರದ ತಾರಾಗಣ ಸಂಪೂರ್ಣವಾಗಿ ಹೊಸಬರಿಂದಲೇ ಕೂಡಿದೆ. ರಂಗಭೂಮಿ ಪ್ರತಿಭೆಗಳು ಚಿತ್ರದಲ್ಲಿ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್, ಗೋಪಾಲ ದೇಶಪಾಂಡೆ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.
ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ ಎಂಬುದು ಮತ್ತಷ್ಟು ವಿಶೇಷ. ಕಥೆಯೊಂದಿಗೆ ಹೊಸೆದುಕೊಂಡಂಥ ಎರಡು ಹಾಡುಗಳಿಗೆ ಖುದ್ದು ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ 'ಎಲಿಫೆಂಟ್ ವಿಸ್ಪರ್ಸ್' ಚಿತ್ರದ ಭಾಗವಾಗಿದ್ದ ಶ್ರೇಯಾಂಕ್ ನಂಜಪ್ಪ 'ಕೆಂಡ' ಚಿತ್ರಕ್ಕೆ ಶಬ್ಧ ಸಂಯೋಜನೆ ಮಾಡಿದ್ದಾರೆ.
'ಗಂಟುಮೂಟೆ' ಸಿನಿಮಾ ಕೊಟ್ಟಿದ್ದ ತಂಡವೇ 'ಕೆಂಡ'ದ ಸಾರಥ್ಯ ವಹಿಸಿರೋದರಿಂದಾಗಿ, ಈ ಚಿತ್ರ ಒಂದಷ್ಟು ಕುತೂಹಲ ಮೂಡಿಸಿದೆ. ಯುವ ಸಮೂಹದ ಕನಸು, ನಿರಾಸೆ, ತವಕ, ತಲ್ಲಣಗಳನ್ನು ಹೊಂದಿರುವ ಈ ಚಿತ್ರ ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯವೂ ಅಂತಿಮ ಘಟ್ಟದಲ್ಲಿದೆ.