

ಬೆಂಗಳೂರು: ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಮ್ ಮೂಲಕ ಜನರಿಗೆ ಗಾಳ ಹಾಕಿ, ಕಡಿಮೆ ಹಣ ಹೂಡಿಕೆ ಮಾಡಿದವರಿಗೆ ಲಕ್ಷಾಂತರ ರೂಪಾಯಿ ಲಾಭವಾಗಿ ಕೊಡುವುದಾಗಿ ಆಮಿಷವೊಡ್ಡಿ ದೇಶದಾದ್ಯಂತ ಸಾವಿರಾರು ಜನರನ್ನು ವಂಚಿಸಿ 854 ಕೋಟಿ ರೂ.ಗೂ ಅಧಿಕ ಹಣವನ್ನು ದೋಚಿದ್ದ ಅಂತಾರಾಷ್ಟ್ರೀಯ ಜಾಲವನ್ನು ಬೇಧಿಸಿರುವ ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ೬ ಮಂದಿಯನ್ನು ಬಂಧಿಸಿದ್ದಾರೆ.
ವಿದ್ಯಾರಣ್ಯಪುರ, ಯಲಹಂಕ, ಭಾಗದಲ್ಲಿ ವಾಸವಾಗಿದ್ದ ಮನೋಜ್ ಅಲಿಯಾಸ್ ಜಾಕ್, ಫಣೀಂದ್ರ, ಚಕ್ರಧರ್ ಅಲಿಯಾಸ್ ಚಕ್ರಿ, ಶ್ರೀನಿವಾಸ್, ಸೋಮಶೇಖರ್ ಅಲಿಯಾಸ್ ಅಂಕಲ್ ಹಾಗೂ ವಸಂತ್ ಕುಮಾರ್ ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಪರಿಕರಗಳಾದ
ವಿವಿಧ ಕಂಪನಿಗಳ ೧೩ ಮೊಬೈಲ್ ಫೋನ್, ೭ ಲ್ಯಾಪ್‌ಟಾಪ್‌ಗಳು, ೧ ಪ್ರಿಂಟರ್,೧ ಸ್ವೈಪಿಂಗ್ ಮಶೀನ್, ೧ ಹಾರ್ಡ್‌ಡಿಸ್ಕ್, ಹಲವು ಪಾಸ್‌ಬುಕ್ ಮತ್ತಿತರ ದಾಖಲಾತಿ ಹಾಗೂ ಆರೋಪಿಗಳ ೮೪ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿ ೫ ಕೋಟಿ ರೂ.ಗಳಿಗೂ ಹೆಚ್ಚಿನ ಹಣವನ್ನು ಸಂರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವ್ಯಕ್ತಿಯೊಬ್ಬರಿಗೆ ಆ್ಯಪ್ ಮೂಲಕ ಹಂತ ಹಂತವಾಗಿ ಹಣವನ್ನು ಹೂಡಿಕೆ ಮಾಡಿಸಿಕೊಂಡು ೮.೫ ಲಕ್ಷ ರೂ. ಪಡೆದುಕೊಂಡು ಅಸಲು ಮತ್ತು ಲಾಭಾಂಶವನ್ನು ನೀಡದೆ ವಂಚನೆ ಮಾಡಿದ್ದರು. ವಂಚನೆಗೊಳಗಾದವರು ಏ.೨೮ ರಂದು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ನೇಹಿತೆಯನ್ನು ನೋಡಿ ಇನ್ವೆಷ್ಟ್:
ದೂರುದಾರರ ಸ್ನೇಹಿತೆಯೊಬ್ಬರು ‘‘ದಿ ವೈನ್ ಗ್ರೂಪ್’ ಎಂಬ ಆ್ಯಪ್‌ನಲ್ಲಿ ಹಣವನ್ನು ಹೂಡಿಕೆ ಮಾಡಿ ಅದರಿಂದ ಲಾಭ ಮಾಡಿಕೊಂಡಿದ್ದನ್ನು ತಿಳಿದು ಆ್ಯಪ್‌ನ್ನು ಡೋನ್ ಲೋಡ್ ಮಾಡಿಕೊಂಡು ಅದರಲ್ಲಿದ್ದ ವಿವಿಧ ಇನ್‌ಸ್ಟಾಲ್‌ಮೆಂಟ್ ಆಫರ್‌ಗಳಿದ್ದು, ನೋಡಿ ಇದರಿಂದ ನಾನು ಕೂಡ ಹಣವನ್ನು ಸಂಪಾದನೆ ಮಾಡಬಹುದೆಂದು ನಿರ್ಧರಿಸಿ ಅದರಲ್ಲಿ ಹೂಡಿಕೆ ಮಾಡಲು ಒಪ್ಪಿ, ತನ್ನ ಬ್ಯಾಂಕ್ ಖಾತೆಯಿಂದ ಹಣವನ್ನು ಆರೋಪಿಗಳು ಹೇಳಿದ ಐಸಿಐಸಿಐ ಬ್ಯಾಂಕ್ ಖಾತೆ, ಬ್ಯಾಂಕ್ ಆಫ್ ಮಹಾರಾಷ್ಟ್ರ ಖಾತೆಗೆ ಮತ್ತು ಯುಪಿಐ ಐಡಿಗಳಿಗೆ ಹಂತ ಹಂತವಾಗಿ ೮.೫ ಲಕ್ಷ ರೂ. ಕಳುಹಿಸಿರುವುದನ್ನು ದೂರಿನಲ್ಲಿ ಉಲ್ಲೇಖಿಸಿದ್ದರು.
ಹಲವು ಆಯಾಮಗಳಲ್ಲಿ ತನಿಖೆ:
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡ ಸಿಸಿಬಿ ಸೈಬರ್ ಕ್ರೈಂ ಅಧಿಕಾರಿಗಳಿಗೆ ವಿವಿಧ ಬ್ಯಾಂಕ್‌ಗಳ ಅಕೌಂಟ್‌ಗಳಿಗೆ ಹಣವು ವರ್ಗಾವಣೆಯಾಗಿರುವುದು ಕಂಡು ಬಂದಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಯಿತು. ಅದರಲ್ಲಿ ತಮಿಳುನಾಡಿನಲ್ಲಿ ತೆರೆದ ಒಂದು ಬ್ಯಾಂಕ್ ಖಾತೆಯಿಂದ ಬೆಂಗಳೂರಿನ ಸುಬ್ಬು ಎಂಟರ್ ಪ್ರೈಸೆಸ್ ಎಂಬ ಬ್ಯಾಂಕ್ ಖಾತೆಗೆ ಹಣವು ವರ್ಗಾವಣೆಯಾಗಿರುವುದು ತಿಳಿದು ಬಂದಿದೆ. ಆ ಬ್ಯಾಂಕ್ ಖಾತೆಯ ಮಾಲೀಕರನ್ನು ವಿಚಾರಿಸಿದ್ದಾಗ ತನಗೆ ಅರಿವಿಲ್ಲದಂತೆ ದಾಖಲಾತಿಗಳನ್ನು ಪಡೆದುಕೊಂಡಿದ್ದ ಆತನ ಸ್ನೇಹಿತನಾದ ಆರೋಪಿ ವಸಂತಕುಮಾರ್ ಬ್ಯಾಂಕ್ ಅಧಿಕಾರಿಗಳಿಗೆ ಮಾಲೀಕರ ಹೆಸರಿನಲ್ಲಿ ದಾಖಲಾತಿಗಳನ್ನು ನೀಡಿ ಬ್ಯಾಂಕ್ ಖಾತೆ ತೆರೆದು ಕೃತ್ಯಕ್ಕೆ ಬಳಸಿರುವುದು ಕಂಡು ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಆರೋಪಿಗಳಾದ ಮನೋಜ್ ಮತ್ತು ಸೋಮಶೇಖರ್‌ನನ್ನು ಬಂಧಿಸಲಾಯಿತು. ಇಬ್ಬರು ನೀಡಿದ ಮಾಹಿತಿಯನ್ನು ಆಧರಿಸಿ ಉಳಿದ ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳು ಹಣ ವಿತ್ ಡ್ರಾ ಮಾಡುವ ಸ್ಥಳಗಳನ್ನು ಪತ್ತೆ ಹಚ್ಚಿ ಬಳಿಕ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆನ್‌ಲೈನ್‌ನಲ್ಲಿ ಸಂಪರ್ಕ:
ಆರೋಪಿಗಳನ್ನು ಕೂಲಂಕುಶವಾಗಿ ವಿಚಾರಣೆ ನಡೆಸಿದ್ದಾಗ ಆರೋಪಿ ಮನೋಜ್ ಫೇಸ್‌ಬುಕ್‌ನಲ್ಲಿ ಪರಿಚಯವಾದ ಇನ್ನಿತರ ಆರೋಪಿಗಳೊಂದಿಗೆ ಆನ್‌ಲೈನ್‌ನಲ್ಲಿ ಸಂಪರ್ಕ ಸಾಧಿಸಿ, ಅವರ ಜತೆ ಸೇರಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಬ್ಯಾಂಕ್ ಖಾತೆಗಳನ್ನು ಪಡೆದುಕೊಂಡು ಆ ಖಾತೆಗಳ ಮಾಹಿತಿಯನ್ನು ತಲೆಮರೆಸಿಕೊಂಡಿರುವ ಇತರೆ ಆರೋಪಿಗಳಿಗೆ ನೀಡುತ್ತಿದ್ದರು. ಆ ಮಾಹಿತಿಯನ್ನು ಪಡೆದುಕೊಂಡು ಆರೋಪಿಗಳು ಅಮಾಯಕ ಜನರನ್ನು ವಂಚಿಸುತ್ತಿದ್ದರು. ಹೀಗೆ ಕೃತ್ಯದಿಂದ ವಂಚನೆಗೊಳಗಾದವರಲ್ಲಿ ಬೆಂಗಳೂರಿನ ೧೭ ವ್ಯಕ್ತಿಗಳಿದ್ದು, ಈ ಸಂಬಂಧ ವಿವಿಧ ಪೊಲೀಸ್ ಠಾಣೆಗಳಲ್ಲಿ ೧೭ ಪ್ರಕರಣಗಳನ್ನು ದಾಖಲಿಸಿದ್ದಾರೆ. ನಗರ ಸೈಬರ್ ಪೊಲೀಸ್ ಠಾಣೆಯ ೨ ಪ್ರಕರಣಗಳು, ಆಗ್ನೇಯ ವಿಭಾಗದಲ್ಲಿ ೩ ಪ್ರಕರಣಗಳು, ಈಶಾನ್ಯ ವಿಭಾಗದಲ್ಲಿ ೪ ಪ್ರಕರಣಗಳು ಮತ್ತು ಉತ್ತರ ವಿಭಾಗದಲ್ಲಿ ೮ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣದಲ್ಲಿ ಅಂತರಾಷ್ಟ್ರೀಯ ವ್ಯಕ್ತಿಗಳ ಕೈವಾಡ ಇರುವುದು ಪತ್ತೆಯಾಗಿದ್ದು ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.