

ವಿಜಯವಾಣಿ ಸುದ್ದಿಜಾಲ ಕಡಬ
ಸಾರ್ವಜನಿಕ ನೆಲೆಯಲ್ಲಿ ನಾವು ಗಣೇಶ ಚತುರ್ಥಿಯನ್ನು ಆಚರಣೆಯನ್ನು ಮಾಡುವುದರಿಂದ, ನಮ್ಮಲ್ಲಿ ಐಕ್ಯ ಭಾವನೆ ಬೆಳೆಯುತ್ತದೆ. ಧರ್ಮದಲ್ಲಿ ವಿಶಾಲ ಭಾವನೆ ವೃದ್ಧಿಯಾಗಬೇಕು. ಯುವ ಪೀಳಿಗೆಯಲ್ಲಿ ಹಿರಿಯರು ನಡೆಸಿಕೊಂಡು ಬಂದಿರುವ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುವ ಪ್ರವೃತ್ತಿ ಬೆಳೆಯುವಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರೇರಣೆಯಾಗಲಿ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಮಾಧವ ಭಟ್ ಹೇಳಿದರು.
ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಶ್ರೀ ವಿನಾಯಕ ಸಭಾಭವನದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈ ಮಾತನಾಡಿ, ಸಹಕಾರಿ ಧುರೀಣರಾಗಿದ್ದ ದಿ.ಕೆ.ಎಸ್.ಎನ್.ನಿಡ್ವಣ್ಣಾಯ ಕುಮಾರಮಂಗಲ ಮತ್ತು ಸವಣೂರು ಸಿ.ಎ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದ ದಿ.ಚಂದ್ರಾಕ್ಷ ರೈ ಕೊಯಿಲ 42 ವರ್ಷಗಳ ಹಿಂದೆ ಸವಣೂರಿನಲ್ಲಿ ಗಣೇಶೋತ್ಸವವನ್ನು ಪ್ರಾರಂಭ ಮಾಡಿದ್ದರು. ಅಂದಿನಿಂದ ಇಂದಿನ ತನಕ ಎಲ್ಲರ ಸಹಕಾರದಿಂದ ವಿಜೃಂಭಣೆಯಿಂದ ನಡೆಯುತ್ತಿದೆ ಎಂದರು.
ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಿವರಾಮ ಗೌಡ ಮೆದು ಅಧ್ಯಕ್ಷತೆ ವಹಿಸಿದ್ದರು. ಸವಣೂರು ಗ್ರಾ.ಪಂ., ಅಭಿವೃದ್ಧಿ ಅಧಿಕಾರಿ ಸಂದೇಶ್ ಕೆ.ಎನ್.ಮಾತನಾಡಿದರು.
ಹಿರಿಯ ಉದ್ಯಮಿ ಸವಣೂರು ಎನ್.ಸುಂದರ ರೈ, ಸವಣೂರು ಗ್ರಾ.ಪಂ, ಮಾಜಿ ಉಪಾಧ್ಯಕ್ಷ ಪಿ.ಡಿ.ಗಂಗಾಧರ ರೈ ದೇವಸ್ಯ ಉಪಸ್ಥಿತರಿದ್ದರು. ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ರಾಘವ ಗೌಡ ಸವಣೂರು, ಕೋಶಾಧಿಕಾರಿ ರಾಮಕೃಷ್ಣ ಪ್ರಭು, ಜೊತೆ ಕಾರ್ಯದರ್ಶಿ ಪ್ರಭಾಕರ್ ಶೆಟ್ಟಿ ನಡುಬೈಲು, ಸತೀಶ್ ಬಲ್ಯಾಯ ಕನಡಕುಮೇರು, ಗಂಗಾಧರ ಸುಣ್ಣಾಜೆ, ವಿಜಯ ಈಶ್ವರ ಗೌಡ, ಕುಸುಮಾ ಪಿ.ಶೆಟ್ಟಿ ಕೆರೆಕೋಡಿ ಅತಿಥಿಗಳನ್ನು ಗೌರವಿಸಿದರು. ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಸುಧಾಕರ್ ರೈ ದೇವಸ್ಯ ವಂದಿಸಿದರು, ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಉಪನ್ಯಾಸಕಿ ನಮಿತಾ ಪ್ರಾರ್ಥಿಸಿದರು. ಸವಣೂರು ಸಿಎ ಬ್ಯಾಂಕ್ ಸಿಇಒ ಚಂದ್ರಶೇಖರ್ ಪಿ.ನಿರೂಪಿಸಿದರು.