ಗಾಂಧೀಜಿ ರಾಜಕೀಯ ಸಂತ

hbr
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಗಾಂಧಿ ಸ್ವರಾಜ್ಯದ ಪರಿಕಲ್ಪನೆ ಪೂರ್ಣ ಪ್ರಮಾಣದ ಸ್ವಾವಲಂಬಿ, ಸ್ವತಂತ್ರ ದೇಶ ನಿರ್ಮಾಣವೇ ಹೊರತು ಸ್ವದೇಶಿ ಮತ್ತು ವಿದೇಶಿ ಬಂಡವಾಳಿಗರ ಅವಲಂಬನೆ ಅಲ್ಲ. ಅವರು ವಸ್ತು, ವಿಚಾರಗಳಲ್ಲಿ ಯಾರನ್ನೂ ಅವಲಂಬಿಸದೆ ಪೂರ್ಣ ಸ್ವಾಯತ್ತತೆ ಗಳಿಸಿಕೊಳ್ಳುವುದಕ್ಕೆ ಭೂಮಿಕೆಯಾಗಿ ಅಹಿಂಸೆ, ಶಾಂತಿ, ಮತರೂಪಗಳ ಗೋಡೆ ದಾಟಿ ಸಾಮರಸ್ಯ ಅಳವಡಿಸಿಕೊಳ್ಳುವುದೇ ಆಗಿದೆ ಎಂದು ಪ್ರತಿಪಾದಿಸಿದ ರಾಜಕೀಯ ಸಂತ ಗಾಂಧಿ ಆಗಿದ್ದರು ಎಂದು ನಿವೃತ್ತ ಪ್ರಾಂಶುಪಾಲ ಡಾ.ದಿನೇಶ ಹೆಗ್ಡೆ ಅಭಿಪ್ರಾಯಪಟ್ಟರು.

ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಗುಣಮಟ್ಟ ಭರವಸೆ ಕೋಶ, ಕನ್ನಡ ಮತ್ತು ರಾಜ್ಯಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿ, ಗಾಂಧಿ ಭಾರತದ ಅಂಗವಾಗಿ ಗುರುವಾರ ನಡೆದ ವಿಶೇಷ ಉಪನ್ಯಾಸ ಮತ್ತು ಸಾಕ್ಷೃಚಿತ್ರ ಪ್ರದರ್ಶನ ‘ಗಾಂಧಿ ಮತ್ತು ಹಿಂದ್ ಸ್ವರಾಜ್’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಜಯಪ್ರಕಾಶ ಶೆಟ್ಟಿ ಎಚ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಏಕಕಾಲದಲ್ಲಿ ಅನೇಕ ಧರ್ಮಗಳನ್ನು ಬದುಕಿದ ಗಾಂಧಿಗೆ, ಸತ್ಯವೇ ದೇವರಾಗಿತ್ತು ಎಂದರು.

ಕನ್ನಡ ಉಪನ್ಯಾಸಕ ರಾಮಾಂಜಿ ಉಡುಪಿ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಪ್ರೊ.ನಂದೀಶ್‌ಕುಮಾರ್ ಕೆ.ಸಿ., ವಿದ್ಯಾರ್ಥಿ ನಾಯಕ ಈರಬಸು, ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ., ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.

ವಿದ್ಯಾರ್ಥಿ ವಿಖ್ಯಾತ್ ಗಾಂಪ್ರಿಯ ಮಂತ್ರ ಪಠಣ ಮಾಡಿದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಅಪರ್ಣಾ ಕೆ.ಯು. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಅಶ್ವಿನಿ ಡಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ವಂದಿಸಿದರು. ದೀಕ್ಷಾ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net