

ವಾಷಿಂಗ್ಟನ್: ‘ನನ್ನ ಮಗನಿಗೆ/ಮಗಳಿಗೆ ಎಷ್ಟು ಹೇಳಿದ್ರೂ ಕೇಳೋದೇ ಇಲ್ಲ, ಯಾವಾಗ ನೋಡಿದ್ರೂ ವಿಡಿಯೋ ಗೇಮ್ಸ್, ಕಂಪ್ಯೂಟರ್ ಗೇಮ್ಸ್ ಅಂತ ಆಡ್ತಾನೆ ಇರ್ತಾನೆ/ ಇರ್ತಾಳೆ ಅಂತ ಬಹುತೇಕ ಎಲ್ಲಾ ಪಾಲಕರು ಹೇಳಿಯೇ ಇರುತ್ತದೆ. ಆದರೆ ಮಕ್ಕಳು ಮಾತ್ರ ಗೇಮ್ಸ್ ಆಡೋದನ್ನು ಬಿಡೋದಿಲ್ಲ ಎನ್ನುವುದು ಅಷ್ಟೇ ಸತ್ಯ.
ಆದರೆ ಇಲ್ಲೊಬ್ಬ ಬಾಲಕನ ತಂದೆ ಹಾಗೆ ಮಾಡದೆ ಎಷ್ಟು ಬೇಕಾದರೂ ಗೇಮ್ಸ್ ಆಡ್ಕೋ ಎಂದು ಮಗನನ್ನು ಉತ್ತೇಜಿಸುತ್ತಲೇ ಬಂದಿದ್ದರು. ಮಗನಿಗೂ ಅಷ್ಟೇ ವಿಡಿಯೋ ಗೇಮ್ಸ್ ಆಡುವುದು ಎಂದರೆ ಬಲು ಇಷ್ಟ. ತನ್ನ ದಿನದ ಬಹುಪಾಲು ಸಮಯವನ್ನು ಈತ ಆಟದಲ್ಲಿಯೇ ಕಳೆಯುತ್ತಿದ್ದ.
ಆದರೆ ಇತರ ಮಕ್ಕಳಂತೆ ಈತ ಆಟವನ್ನು ಕೆಟ್ಟ ಅಭ್ಯಾಸವಾಗಿ ಬದಲಿಸಿಕೊಳ್ಳಲಿಲ್ಲ, ಬದಲಿಗೆ ಅದರಿಂದಲೇ ಪ್ರಯೋಜನ ಪಡೆದ. ಇದೀಗ ಅದೇ ಆಟ ಈತನನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ದಿದೆ! ಹೌದು. ಅಮೆರಿಕದ ಅಲೆಕ್ಸ್ ಮೆಕಾಚೈನ್ ಎಂಬ ಹೆಸರಿನ 17 ವರ್ಷದ ಹುಡುಗ ಇದೀಗ ವೃತ್ತಿಪರ ಆಟಗಾರನಾಗಿದ್ದಾನೆ. ಆನ್‌ಲೈನ್ ಆಟದ ಮೇಲೆ ಪರಿಣತಿ ಸಾಧಿಸಿದ್ದಾನೆ.
ಇಷ್ಟೇ ಆಗಿದ್ದರೆ ಬಾಲಕ ಇಷ್ಟೊಂದು ಹೆಸರುವಾಸಿಯಾಗುತ್ತಿರಲಿಲ್ಲ. ಆದರೆ ಆನ್‌ಲೈನ್ ಆಟದ ಕುರಿತಂತೆ ಖಾತೆಯೊಂದನ್ನು ತೆರೆದಿರುವ ಈ ಬಾಲಕ ಈಗಾಗಲೇ 22 ಸಾವಿರಕ್ಕೂ ಅಧಿಕ ಬೆಂಬಲಿಗರನ್ನು ಹೊಂದಿದ್ದಾನೆ. ಕಳೆದ 18 ತಿಂಗಳುಗಳಿಂದ ಈ ಆಟದ ಮೇಲೆ ಸಾಕಷ್ಟು ಅಧ್ಯಯನ ಮಾಡಿರುವ ಬಾಲಕ ಅಲೆಕ್ಸ್. ಆಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಇದಾಗಲೇ 42 ಸಾವಿರ ಡಾಲರ್ (ಸುಮಾರು 32 ಲಕ್ಷ ರೂಪಾಯಿ) ಸಂಪಾದನೆ ಮಾಡಿದ್ದಾನೆ.