ತಾತನಾದ ಜನಾರ್ದನ ರೆಡ್ಡಿ; ಬಳ್ಳಾರಿಗೆ ಭೇಟಿ ನೀಡಲು ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್​ಗೆ ಮನವಿ

20082021 Janardhan reddy
Published on

ನವದೆಹಲಿ: ಬಳ್ಳಾರಿಗೆ ಭೇಟಿ ನೀಡಲು ಅವಕಾಶ ಕೋರಿ ಅಕ್ರಮ ಗಣಿಗಾರಿಕೆ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಮನವಿ ಬಗ್ಗೆ ಸುಪ್ರೀಂಕೋರ್ಟ್ ಶುಕ್ರವಾರ ಬೆಳಗ್ಗೆ ಆದೇಶ ಪ್ರಕಟಿಸಲಿದೆ.

ಜನಾರ್ದನ ರೆಡ್ಡಿ ಪುತ್ರಿ 2 ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದು, ಅವರೊಂದಿಗೆ ನಾಲ್ಕು ವಾರಗಳ ಕಾಲ ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಬೇಕೆಂದು ಬಯಸಿದ್ದಾರೆ. ಇದಕ್ಕೆ ನ್ಯಾಯಾಲಯ ಅವಕಾಶ ಮಾಡಿಕೊಡಬೇಕು ಎಂದು ರೆಡ್ಡಿ ಪರ ವಕೀಲೆ ಮೀನಾಕ್ಷಿ ಆರೋರಾ ನ್ಯಾ. ಎಂ.ಆರ್. ಶಾ ಮತ್ತು ನ್ಯಾ ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ವಿನಂತಿಸಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, "ಈ ವಿಷಯದ ಬಗ್ಗೆ ಸಿಬಿಐ ಪರಿಶೀಲನೆ ನಡೆಸಿ ಶುಕ್ರವಾರ ಬೆಳಗ್ಗೆ ವರದಿ ನೀಡಲಿ. ನಂತರ ನಾವು ನಮ್ಮ ತೀರ್ಮಾನ ಪ್ರಕಟಿಸುತ್ತೇವೆ" ಎಂದು ತಿಳಿಸಿತು.

ಅಕ್ರಮ ಗಣಿಗಾರಿಕೆ ಪ್ರಕರಣದ ಬಗ್ಗೆ ಹೈದ್ರಾಬಾದ್​ನ ಸ್ಥಳೀಯ ನ್ಯಾಯಾಲಯ ವಿನಾಕಾರಣ ವಿಳಂಬ ಮಾಡುತ್ತಿರುವ ಬಗ್ಗೆ ಹಿಂದಿನ ವಿಚಾರಣೆ ವೇಳೆ ಕೆಂಡಕಾರಿದ್ದ ಇದೇ ನ್ಯಾಯಪೀಠ, ತ್ವರಿತಗತಿಯಲ್ಲಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡುವಂತೆ ಸೂಚಿಸಿದ್ದು ಇಲ್ಲಿ ಉಲ್ಲೇಖಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net