ಬನಾರಸಿ ಸೀರೆ, ಕನ್ನೌಜ್ ಸುಗಂಧ ದ್ರವ್ಯ, ಡಾರ್ಜಿಲಿಂಗ್ ಚಹಾ….ಜಿ20 ಅತಿಥಿಗಳಿಗೆ ಮೋದಿ ಏನೆಲ್ಲಾ ಗಿಫ್ಟ್ ಕೊಟ್ಟಿದ್ದಾರೆ ಗೊತ್ತಾ?

g20 gifts
Published on

ನವದೆಹಲಿ: ಭಾರತವು ಜಿ 20 ಶೃಂಗಸಭೆಯ ಅಧ್ಯಕ್ಷತೆಯನ್ನು ಯಶಸ್ವಿಯಾಗಿ ವಹಿಸಿದೆ. ಅಮೆರಿಕ ಸೇರಿದಂತೆ ಎಲ್ಲಾ ಜಿ20 ಸದಸ್ಯ ರಾಷ್ಟ್ರಗಳು ಭಾರತದ ಆತಿಥ್ಯವನ್ನು ಶ್ಲಾಘಿಸಿವೆ. ಭಾರತ ಅತ್ಯುತ್ತಮ ಆತಿಥ್ಯ ವಹಿಸಿದೆ ಎಂದು ಅರ್ಜೆಂಟೀನಾದ ಅಧ್ಯಕ್ಷ ಅಲ್ಬರ್ಟೊ ಫೆರ್ನಾಂಡಿಸ್ ಹೇಳಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದ ನಡುವೆ ಭಾರತವು ಈ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ರೀತಿ ಬಹಳ ಮೆಚ್ಚುಗೆಗೆ ಪಾತ್ರವಾಗಿದೆ. ಅಂದಹಾಗೆ ಜಿ 20 ಮುಗಿದ ನಂತರ, ಅತಿಥಿಗಳಿಗೆ ಅನೇಕ ಅದ್ಭುತ ಉಡುಗೊರೆಗಳನ್ನು ನೀಡಲಾಯಿತು.

ವಿಶೇಷ ಉಡುಗೊರೆಗಳು
ಜಿ20ಗೆ ಹಾಜರಾಗುವ ತಮ್ಮ ದೇಶಗಳನ್ನು ಪ್ರತಿನಿಧಿಸುವ ರಾಷ್ಟ್ರಗಳ ಮುಖ್ಯಸ್ಥರು ಮತ್ತು ನಾಯಕರಿಗೆ ಭಾರತ ಸರ್ಕಾರದಿಂದ ವಿಶೇಷ ಉಡುಗೊರೆಗಳನ್ನು ನೀಡಲಾಯಿತು. ಗಿಫ್ಟ್ ಹ್ಯಾಂಪರ್‌ಗಳಲ್ಲಿ ಕೈಯಿಂದ ಮಾಡಿದ ಕಲಾಕೃತಿಗಳು, ಸುಗಂಧ ದ್ರವ್ಯಗಳು ಮತ್ತು ಖಾದಿಯಿಂದ ಮಾಡಿದ ಸೊಗಸಾದ ಸೀರೆಗಳು ಮತ್ತು ಸ್ಟೋಲ್‌ಗಳು ಸೇರಿವೆ. ಇವೆಲ್ಲವೂ ಭಾರತದ ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತವೆ. ನುರಿತ ಕುಶಲಕರ್ಮಿಗಳ ಕೈಯಿಂದ ಇವುಗಳನ್ನು ಎಚ್ಚರಿಕೆಯಿಂದ ತಯಾರಿಸಲಾಗಿದೆ. ಕೆಲವು ಉತ್ಪನ್ನಗಳು ನಮ್ಮ ದೇಶದ ವಿಶಿಷ್ಟ ಜೀವವೈವಿಧ್ಯತೆಯ ಪರಿಣಾಮವಾಗಿದೆ.

ಶೀಶಮ್ ಮರದಿಂದ ಮಾಡಿದ ಪೆಟ್ಟಿಗೆ
ಅತಿಥಿಗಳಿಗೆ ವಿಶೇಷ ಪೆಟ್ಟಿಗೆಯನ್ನು ನೀಡಲಾಯಿತು. ಈ ಪೆಟ್ಟಿಗೆಯನ್ನು ಶೀಶಮ್ ಮರದಿಂದ ಮಾಡಲಾಗಿತ್ತು. ಪೆಟ್ಟಿಗೆಯ ಮೇಲಿನ ಹಿತ್ತಾಳೆಯ ಪಟ್ಟಿಯನ್ನು ಸೂಕ್ಷ್ಮವಾಗಿ ಕೆತ್ತಲಾಗಿದೆ. ಉಡುಗೊರೆಯಲ್ಲಿ ಕಾಶ್ಮೀರದ ಕೇಸರಿ ಕೂಡ ಸೇರಿದೆ. ಕೇಸರಿ (ಪರ್ಷಿಯನ್ ಭಾಷೆಯಲ್ಲಿ 'ಜಾಫ್ರಾನ್', ಹಿಂದಿಯಲ್ಲಿ 'ಕೇಸರ್') ಪ್ರಪಂಚದ ಅತ್ಯಂತ ವಿಶಿಷ್ಟ ಮತ್ತು ದುಬಾರಿ ಮಸಾಲೆಯಾಗಿದೆ. ಎಲ್ಲಾ ಸಂಸ್ಕೃತಿ ಮತ್ತು ನಾಗರಿಕತೆಯಲ್ಲಿ ಕೇಸರಿಯು ಅದರ ವಿಶಿಷ್ಟ ರುಚಿ ಮತ್ತು ಔಷಧೀಯ ಮೌಲ್ಯಕ್ಕಾಗಿ ಮೌಲ್ಯಯುತವಾಗಿದೆ. ಭಾರತದಲ್ಲಿನ ಡಾರ್ಜಿಲಿಂಗ್ ಚಹಾ ಎಲೆಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಜಿ20 ಗೆ ಆಗಮಿಸಿದ ಅತಿಥಿಗಳಿಗೆ ಡಾರ್ಜಿಲಿಂಗ್ ಚಹಾ ಎಲೆಗಳನ್ನು ಸಹ ಉಡುಗೊರೆಯಾಗಿ ನೀಡಲಾಯಿತು. ಇದೇ ವೇಳೆ ಆಂಧ್ರಪ್ರದೇಶದ ಅರಕು ಕಣಿವೆಯಲ್ಲಿ ಸಾವಯವ ತೋಟಗಳಲ್ಲಿ ಬೆಳೆದ ಕಾಫಿಯನ್ನೂ ಉಡುಗೊರೆಯಾಗಿ ನೀಡಲಾಯಿತು. ಉತ್ತರ ಪ್ರದೇಶದ ಕನೌಜ್‌ನಲ್ಲಿ ತಯಾರಿಸಲಾದ ಜಿಘ್ರಾನಾ ಸುಗಂಧ ದ್ರವ್ಯವನ್ನು ಉಡುಗೊರೆ ಹ್ಯಾಂಪರ್‌ನಲ್ಲಿ ಸೇರಿಸಲಾಗಿದೆ. ಅಷ್ಟೇ ಅಲ್ಲ, ಖಾದಿ ಸ್ಕಾರ್ಫ್‌ಗಳನ್ನು ಉಡುಗೊರೆಯಾಗಿ ನೀಡಲಾಯಿತು.

ರಾಷ್ಟ್ರದ ಮುಖ್ಯಸ್ಥರ ಪತ್ನಿಯರಿಗೆ ಉಡುಗೊರೆಯಾಗಿ ಸೀರೆ
ಭಾರತ ಸರ್ಕಾರವು ಅರ್ಜೆಂಟೀನಾ ಅಧ್ಯಕ್ಷರ ಪತ್ನಿಗೆ ಬನಾರಸ್ ಸೀರೆ, ಕಾಶ್ಮೀರಿ ಪಶ್ಮಿನಾವನ್ನು ಆಸ್ಟ್ರೇಲಿಯಾ ಮತ್ತು ಬ್ರೆಜಿಲ್‌ನ ಪ್ರಧಾನ ಮಂತ್ರಿಯ ಪತ್ನಿಗೆ ಉಡುಗೊರೆಯಾಗಿ ನೀಡಿತು. ಇಂಡೋನೇಷ್ಯಾದ ಅಧ್ಯಕ್ಷರ ಪತ್ನಿಗೆ ಕದಂಬ ಮರದ ಪೆಟ್ಟಿಗೆಯಲ್ಲಿ ಅಸ್ಸಾಂ ಸಿಲ್ಕ್​​ ಸೀರೆ, ಕಾಂಜೀವರಂ ಅನ್ನು ಜಪಾನ್ ಪ್ರಧಾನಿಯ ಪತ್ನಿಗೆ ಉಡುಗೊರೆಯಾಗಿ ನೀಡಲಾಯಿತು. ಬನಾರಸಿಯನ್ನು ಯುನೈಟೆಡ್ ಕಿಂಗ್‌ಡಂನ ಪ್ರಧಾನ ಮಂತ್ರಿಯ ಪತ್ನಿಗೆ ನೀಡಲಾಯಿತು. ಇನ್ನು ಇಕ್ಕತ್ ಸೀರೆಯನ್ನು ಮಾರಿಷಸ್ ಪ್ರಧಾನಿಯ ಪತ್ನಿಗೆ ಉಡುಗೊರೆಯಾಗಿ ನೀಡಲಾಯಿತು.

ಜಿ20 ಅಂಚೆ ಚೀಟಿಗಳು ಮತ್ತು ನಾಣ್ಯಗಳು
ಮೋದಿಯವರು ಜುಲೈ 26 ರಂದು ವಿಶೇಷ ಜಿ20 ಅಂಚೆ ಚೀಟಿಗಳು ಮತ್ತು ನಾಣ್ಯಗಳನ್ನು ಬಿಡುಗಡೆ ಮಾಡಿದರು. ಪ್ರಗತಿ ಮೈದಾನದಲ್ಲಿ ಭಾರತ್ ಮಂಟಪದ ಉದ್ಘಾಟನೆ ಸಂದರ್ಭದಲ್ಲಿ ಜಿ20 ಇಂಡಿಯಾ ಅಂಚೆಚೀಟಿಗಳು ಮತ್ತು ನಾಣ್ಯಗಳನ್ನು ಬಿಡುಗಡೆ ಮಾಡಲಾಯಿತು. ನಾಣ್ಯಗಳು ಮತ್ತು ಅಂಚೆಚೀಟಿಗಳ ವಿನ್ಯಾಸಗಳು ಭಾರತದ ಜಿ20 ಲೋಗೋ ಮತ್ತು 'ವಸುಧೈವ ಕುಟುಂಬಕಂ' ಅಥವಾ 'ಒಂದು ಭೂಮಿ' ಥೀಮ್ ಅನ್ನು ಆಧರಿಸಿವೆ. ಎಲ್ಲಾ ಅತಿಥಿಗಳಿಗೆ ಜಿ20 ಅಂಚೆ ಚೀಟಿಗಳು ಮತ್ತು ನಾಣ್ಯಗಳನ್ನು ಉಡುಗೊರೆಯಾಗಿ ನೀಡಲಾಯಿತು. ಭಾರತವು ಜಿ20 ಅಧ್ಯಕ್ಷ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸಿದೆ ಮತ್ತು 10 ತಿಂಗಳಲ್ಲಿ 58 ನಗರಗಳಲ್ಲಿ 200 ಕ್ಕೂ ಹೆಚ್ಚು ಸಭೆಗಳನ್ನು ಆಯೋಜಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net