

ಶಿವಮೊಗ್ಗ/ಬೆಂಗಳೂರು: ಮಂಗಳೂರಿನ ಕುಕ್ಕರ್ ಸ್ಫೋಟ ಮತ್ತು ಶಿವಮೊಗ್ಗದಲ್ಲಿ ಟ್ರಯಲ್ ಬ್ಲಾಸ್ಟ್ ಪ್ರಕರಣದ ಶಂಕಿತರಿಗೆ ಹಣಕಾಸಿನ ನೆರವು ನೀಡುತ್ತಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ) ಬಂಧಿಸಿದೆ. ಕೀನ್ಯಾದ ನೈರೋಬಿಯಿಂದ ಗಡಿಪಾರು ಆಗಿ ನವದೆಹಲಿ ವಿಮಾನ ನಿಲ್ದಾಣಕ್ಕೆ ಗುರುವಾರ ಬಂದಿಳಿದಾಗ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ದೇಶದಲ್ಲಿನ ಉಗ್ರ ಚಟುವಟಿಕೆಗೆ ಮತ್ತು ಐಸಿಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್) ವಿದೇಶದಿಂದ ಫಂಡಿಂಗ್ ಮಾಡುತ್ತಿದ್ದ ಕಿಂಗ್ಪಿನ್ನ್ನು ಬಂಧಿಸಿರುವುದಾಗಿ ಎನ್ಐಎ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ತೀರ್ಥಹಳ್ಳಿಯ ಇಂದಿರಾನಗರದ ಆರಾಫತ್ ಅಲಿ ಬಂಧಿತ. ಐಸಿಸ್ ಮತ್ತು ಭಯೋತ್ಪಾದನಾ ಕೃತ್ಯಕ್ಕೆ ಪ್ರಚೋದನೆ, ಹಣ ಸಹಾಯ ನೀಡುತ್ತಿದ್ದ ಆರೋಪದ ಮೇಲೆ ಈತನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ ಉಗ್ರ ಚಟುವಟಿಕೆಗಳ ಕಿಂಗ್ಪಿನ್ ಎಂದೇ ಕರೆಸಿಕೊಂಡಿದ್ದ ಆರಾಫತ್ ಅಲಿ, ನೇರವಾಗಿ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗದೆ ವಿದೇಶಗಳಲ್ಲಿ ಕುಳಿತು ಹಣದ ವ್ಯವಸ್ಥೆ ಮಾಡುತ್ತಿದ್ದ. ಕರ್ನಾಟಕದ ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಮತೀನ್ ಜತೆಗೆ ಆರಾಫತ್ ಅಲಿ 2020ರಲ್ಲೇ ಭಾರತದಿಂದ ನಾಪತ್ತೆಯಾಗಿದ್ದ.
ಅಂದಿನಿಂದಲೂ ರಾಜ್ಯದಲ್ಲಿನ ಉಗ್ರ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುತ್ತಿರುವ ಶಂಕೆ ಈತನ ಮೇಲಿತ್ತು.ವಿದೇಶಗಳಲ್ಲಿ ಕುಳಿತು ಕ್ರಿಪ್ಟೋ ಕರೆನ್ಸಿ ಮೂಲಕ ರಾಜ್ಯದಲ್ಲಿನ ಉಗ್ರರಿಗೆ ಹಣಕಾಸಿನ ನೆರವು ನೀಡಿರುವ ಆರೋಪ ಎದುರಿಸುತ್ತಿದ್ದ. ಮುಸ್ಲಿಂ ಯುವಕರನ್ನು ಐಸಿಸ್ಗೆ ಸೆಳೆದು ಅವರನ್ನು ನೇಮಕ ಮಾಡಿಕೊಳ್ಳುತ್ತಿದ್ದ.ಕದ್ರಿ ಗೋಡೆ ಬರಹ ಪ್ರಕರಣದ ಪ್ರಮುಖ ಆರೋಪಿಗಳಾದ ಶಾರಿಕ್ ಹಾಗೂ ಮಾಜ್ ಮುನೀರ್ಗೆ ಈತನೇ ಕ್ರಿಪ್ಟೋ ಕರೆನ್ಸಿ ಮೂಲಕ ಹಣಕಾಸು ನೆರವು ನೀಡುತ್ತಿದ್ದ.
ಇದೆ ಶಾರಿಕ್ ಮತ್ತು ಮಾಜ್ ಮುನೀರ್ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದರು. ಆಗಲೂ ಇವರಿಗೆ ವಿದೇಶದಿಂದ ಹಣಕಾಸಿನ ನೆರವು ಒದಗಿಸಿದ್ದ. ಬಳಿಕ ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ ಸ್ಫೋಟಿದಲು ಕುಕ್ಕರ್ ಬಾಂಬ್ವನ್ನು ಆಟೋದಲ್ಲಿ ಸಾಗಿಸುತ್ತಿದ್ದಾಗ ಸ್ಫೋಟಗೊಂಡು ಶಾರಿಕ್ ಸಿಕ್ಕಿ ಬಿದ್ದಿದ್ದ. ಈ ಎಲ್ಲ ಪ್ಲ್ಯಾನ್ ಮಾಡುವಲ್ಲಿ ಆರಾತ್ ಅಲಿ ಪ್ರಮುಖ ಪಾತ್ರ ವಹಿಸಿದ್ದ ಎಂಬುದು ಎನ್ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರ ಆರಾಫತ್ ಅಲಿಯನ್ನು ವಶಕ್ಕೆ ಪಡೆಯುತ್ತಿದ್ದಂತೆ ಇತ್ತ ಎನ್ಎಐ ತಂಡ ಹೆಚ್ಚಿನ ವಿಚಾರಣೆಗೆ ಮತ್ತೆ ಶಿವಮೊಗ್ಗ ಮತ್ತು ತೀರ್ಥಹಳ್ಳಿಗೆ ಭೇಟಿ ನೀಡಿದೆ. ಈಗಾಗಲೇ ಶಂಕಿತ ಉಗ್ರನ ಸಂಬಂಧ ತೀರ್ಥಹಳ್ಳಿ-ಶಿವಮೊಗ್ಗದಲ್ಲಿ ಮಾಹಿತಿ ಕಲೆ ಹಾಕಿದೆ.
2019ರಲ್ಲಿ ತೀರ್ಥಹಳ್ಳಿ ತೊರೆದು ಬೆಂಗಳೂರಿಗೆ ಹೋಗಿದ್ದ ಆರಾಫತ್ ಅಲಿ, ಇಂಜಿನಿಯರಿಂಗ್ ಮಾಡಿದ್ದ. 2020ರ ನ.2ರಂದು ಮಂಗಳೂರು ಗೋಡೆ ಬರಹ ಪ್ರಕರಣಕ್ಕೆ ಪ್ರಚೋದನೆ ನೀಡಿದ್ದ ಆರೋಪ ಈತನ ಮೇಲಿದೆ. ಅಲ್ಲದೆ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಆರೋಪಿಗಳ ಜತೆ ನೇರ ಸಂಪರ್ಕ ಹೊಂದಿದ್ದ. ದುಬೈನಲ್ಲಿ ಪರ್ಫ್ಯೂಮ್ ಕಂಪನಿಗೆ ಕೆಲಸಕ್ಕೆ ಸೇರಿ ನಾಪತ್ತೆಯಾಗಿದ್ದ. 2020ರಿಂದಲೂ ತಲೆಮರೆಸಿಕೊಂಡಿದ್ದ. ಇದೀಗ ಕೀನ್ಯಾದ ನೈರೋಬಿಯಿಂದ ಬಂದ ವೇಳೆ ಆರಾಫತ್ ಅಲಿ ಎನ್ಐಎ ಬಂಧಿಸಿದೆ.