ಕಂಬಳಕ್ಕೆ ಹೆಚ್ಚು ಅನುದಾನ, ಚರ್ಚಿಸಿ ತೀರ್ಮಾನ

Kambala
Published on

ಬೆಂಗಳೂರು: ಕಂಬಳಕ್ಕೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಅನುದಾನ ಒದಗಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

ವಿಧಾನಸಭೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರತಿ ವರ್ಷ ನಡೆಯುವ ಕಂಬಳಕ್ಕೆ ಸರ್ಕಾರ ಅನುದಾನ ನೀಡುತ್ತಿತ್ತು. ಆದರೆ, ಕಳೆದ ವರ್ಷದಿಂದ ಯಾವುದೇ ಅನುದಾನ ನೀಡದಿರುವ ಕುರಿತು ಗಮನ ಸೆಳೆವ ಸೂಚನೆಗೆ ಸಚಿವರು ಉತ್ತರಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಅನುದಾನ ನೀಡಲಾಗುತ್ತಿತ್ತು ಎಂದು ಶಾಸಕರು ಗಮನ ಸೆಳೆದಿದ್ದಾರೆ. ನಾನು ಸಚಿವನಾಗಿದ್ದಾಗ ನಮ್ಮ ಇಲಾಖೆಗೆ ಲಭ್ಯವಿರುವ ಅನುದಾನ ಆಧರಿಸಿ 10 ಕಂಬಳಗಳಿಗೆ ತಲಾ 5 ಲಕ್ಷ ರೂ.ಗಳನ್ನು ನೀಡುತ್ತಿದ್ದೆ ಎಂದು ಸುನೀಲ್ ಕುಮಾರ್ ದನಿಗೂಡಿಸಿದರಲ್ಲದೆ, ನೀವು ಉದಾರತೆಯಿಂದ ತಲಾ ಉತ್ಸವಕ್ಕೆ 10 ಲಕ್ಷ ರೂ. ಕೊಡಿ ಎಂದು ಆಗ್ರಹಿಸಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಅಶೋಕ್ ಕುಮಾರ್ ರೈ, ಪ್ರತಿ ವರ್ಷ ಎರಡು ಜಿಲ್ಲೆಗಳು ಸೇರಿ 25 ಕಂಬಳಗಳು ಆಗುತ್ತವೆ. ಈ ಪೈಕಿ ಕೇವಲ 10 ಕಂಬಳಗಳಿಗೆ ಅನುದಾನ ನೀಡಿದರೆ ಸಾಕಾಗುವುದಿಲ್ಲ. ಪ್ರತಿಯೊಂದು ಕಂಬಳಕ್ಕೂ 10 ಲಕ್ಷ ರೂ. ನೀಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್, ಕಂಬಳ ಕೇವಲ ಸಾಂಸ್ಕೃತಿಕ ಆಚರಣೆ ಅಲ್ಲ, ಅದೊಂದು ಕ್ರೀಡೆ ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕನಿಷ್ಠ ಒಂದು ಕಂಬಳಕ್ಕೆ 10 ಲಕ್ಷ ರೂ.ಗಳನ್ನಾದರೂ ನೀಡಬೇಕು ಎಂದು ಕೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net