

ಬೈಂದೂರು: ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಗ್ರಾಮೀಣ ಭಾಗಗಳನ್ನು ಸೇರಿಸುವುದರಿಂದ ರೈತರಿಗೆ ತೊಂದರೆಯಾಗಿರುವುದನ್ನು ವಿರೋಧಿಸಿ ನಡೆಸುತ್ತಿರುವ ಹೋರಾಟ ಸ್ವಾಗತಾರ್ಹವಾಗಿದೆ. ರಾಜಕಾರಣಕ್ಕಿಂತ ಮೊದಲ ಆದ್ಯತೆ ರೈತರಿಗೆ. ಅಕ್ರಮ ಸಕ್ರಮ ಅದಾಲತ್ ಮೂಲಕ 94ಸಿ ಮತ್ತು ಬಾಕಿ ಉಳಿದಿರುವ ಕಡತಗಳ ವಿಲೇವಾರಿಗೆ ಚುರುಕಾಗಿ ಕ್ರಮಗೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ರೈತರ ನ್ಯಾಯಯುತ ಬೇಡಿಕೆಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡುವಂತೆ ಆಗ್ರಹಿಸಿ ಬಿಜೆಪಿ ಬೈಂದೂರು ಮಂಡಲ ವತಿಯಿಂದ ತಾಲೂಕು ಆಡಳಿತ ಸೌಧದ ಎದುರು ಶನಿವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಹದಿಮೂರು ದಿನಗಳಿಂದ ರೈತ ಸಂದ ಮುಂದಾಳತ್ವದಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಗಂಟಿಹೊಳೆ ರೈತರೊಂದಿಗೆ ಮಾತನಾಡಿದರು. ಈ ವೇಳೆ ಕೆಲವು ಬಿಜೆಪಿ ಕಾರ್ಯಕರ್ತರು ಪಕ್ಷದ ಶಾಲು ಧರಿಸಿ ವೇದಿಕೆಗೆ ಬಂದಿರುವುದನ್ನು ರೈತರು ಖಂಡಿಸಿದರು. ಈ ವೇಳೆ ಕಾರ್ಯಕರ್ತರು ಹಾಗೂ ರೈತರ ನಡುವೆ ವಾತಿನ ಚಕಮಕಿ ನಡೆಯಿತು. ಬೈಂದೂರು ತಹಸೀಲ್ದಾರ್ ಎಸ್.ರಾಮಚಂದ್ರಪ್ಪ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬೆಳಗ್ಗೆ ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದಿಂದ ತಾಲೂಕು ಆಡಳಿತ ಸೌಧದವರೆಗೆ ಬಿಜೆಪಿ ಕಾರ್ಯಕರ್ತರು ಜಾಥಾ ನಡೆಸಿದರು. ಹಿರಿಯ ಕುಮ್ಕಿ ಹೋರಾಟಗಾರ ಎಂ.ಪಿ.ಸತ್ಯನಾರಾಯಣ ಭಟ್, ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ ಹಾಗೂ ಕಾರ್ಯಕರ್ತರು ಇದ್ದರು. ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.