ಅರುಣಾಛಲ ಭಾರತಕ್ಕೆ ಬಲ; ಫ್ರಂಟಿಯರ್ ಹೆದ್ದಾರಿ ಚೀನಾಕ್ಕೆ ಸೆಡ್ಡುಹೊಡೆಯಲು ಭಾರತಕ್ಕೆ ರಹದಾರಿ

Vihara
Published on
ಭಾರತ- ಚೀನಾ ಗಡಿಯಲ್ಲಿ ಮ್ಯಾಕ್ ಮಹೊನ್ ರೇಖೆಗೆ ಹೊಂದಿಕೊಂಡಂತೆ 2,000 ಕಿಮೀ ಉದ್ದದ ರಸ್ತೆ ನಿರ್ವಿುಸುವ ಫ್ರಂಟಿಯರ್ ಹೈವೇ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ದುರ್ಗಮ ಪ್ರದೇಶದಲ್ಲಿ ವರ್ಷವಿಡೀ ಸಂಚರಿಸಲು ಸಾಧ್ಯವಾಗುವಂತಹ ಈ ಹೆದ್ದಾರಿಗಳು ತಂಟೆಕೋರ ಚೀನಾದ ವಿರುದ್ಧ ಪಾರಮ್ಯ ಸಾಧಿಸಲು ಭಾರತೀಯ ಸೇನೆಗೆ ನೆರವಾಗಲಿವೆ.

| ಎಬಿ

ದೇಶದ ಈಶಾನ್ಯ ಭಾಗದ ಗಡಿಯಲ್ಲಿ ಸಂಪರ್ಕ ಸೌಲಭ್ಯಗಳನ್ನು ಕಲ್ಪಿಸಲು ಕಳೆದ ಏಳು ದಶಕಗಳಿಂದ ಹೆಣಗಾಡಿದ ನಂತರ ಭಾರತ ಸರ್ಕಾರ ಈಗ ಬೃಹತ್ ಪ್ರಮಾಣದಲ್ಲಿ ಮೂಲಸೌಕರ್ಯ ನಿರ್ವಿುಸುವ ಮಹತ್ವದ ಕಾಮಗಾರಿ ಪ್ರಾರಂಭಿಸಿದೆ. ದೇಶದ ಅತಿದೊಡ್ಡ ಮತ್ತು ಅತ್ಯಂತ ಕಠಿಣ ಯೋಜನೆಗಳಲ್ಲಿ ಒಂದಾದ ಅರುಣಾಚಲ ಫ್ರ್ರಟಿಯರ್ ಹೆದ್ದಾರಿ ನಿರ್ವಣಕ್ಕೆ ಅದು ಕೈಹಾಕಿದೆ. ಸಾರಿಗೆ ಸಂಚಾರ ವೇಗವನ್ನು ಹೆಚ್ಚಿಸುವ ಆಯಕಟ್ಟಿನ ಕಾರ್ಯತಂತ್ರದ ಯೋಜನೆ ಇದಾಗಿದೆ. ಕಾಮಗಾರಿ ತ್ವರಿತಗೊಳಿಸಲು ಅತ್ಯಾಧುನಿಕ ಸ್ವದೇಶಿ ಉಪಕರಣಗಳನ್ನು ಬಳಸಲಾಗುತ್ತಿದೆ. ಕೆಲವು ವಿಭಾಗಗಳಲ್ಲಿ ಯೋಜನೆಯ ಕೆಲಸವನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ರಕ್ಷಣಾ ಇಲಾಖೆ ಹಾಗೂ ಹೆದ್ದಾರಿ ಸಚಿವಾಲಯಗಳ ಮೂಲಗಳು ತಿಳಿಸಿವೆ.

2,000 ಕಿಮೀ ಉದ್ದದ ರಸ್ತೆ: ಭಾರತ- ಚೀನಾ ಗಡಿಯಲ್ಲಿ ಮ್ಯಾಕ್ ಮಹೊನ್ ರೇಖೆಗೆ ಹೊಂದಿಕೊಂಡಂತೆ 2,000 ಕಿಮೀ ಉದ್ದದ ರಸ್ತೆ ನಿರ್ವಿುಸುವ ಯೋಜನೆ ಇದಾಗಿದೆ. ಈ ರಸ್ತೆ ಭೂತಾನ್ ದೇಶದ ಪಕ್ಕದಲ್ಲಿರುವ ಅರುಣಾಚಲ ಪ್ರದೇಶದ ಮಾಗೊದಿಂದ ಆರಂಭಗೊಂಡು ತವಾಂಗ್, ಅಪ್ಪರ್ ಸುಬಾನ್ಸಿರಿ, ಟ್ಯೂಟಿಂಗ್, ಮೆಚುಕಾ, ಅಪ್ಪರ್ ಸಿಯಾಂಗ್, ದೇಬಾಂಗ್ ಕಣಿವೆ, ದೇಸಾಲಿ, ಚಗ್ಲಗಾಮ್ ಕಿಬಿತು,ಡಾಂಗ್ ಮೂಲಕ ಹಾದು ಮ್ಯಾನ್ಮಾರ್ ದೇಶದ ಗಡಿ ಬಳಿಯ ವಿಜಯನಗರದಲ್ಲಿ ಕೊನೆಗೊಳ್ಳುತ್ತದೆ. ಈ ಯೋಜನೆಯೊಂದಿಗೆ ಅರುಣಾಚಲ ಪ್ರದೇಶವು ಮೂರು ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಲಿದೆ. ಟ್ರಾನ್ಸ್ ಅರುಣಾಚಲ ಹೆದ್ದಾರಿ ಮತ್ತು ಪೂರ್ವ-ಪಶ್ಚಿಮ ಕೈಗಾರಿಕಾ ಕಾರಿಡಾರ್ ಹೆದ್ದಾರಿ ಈಗಾಗಲೇ ಅಸ್ತಿತ್ವದಲ್ಲಿವೆ. ಈ ಮೂರೂ ಹೆದ್ದಾರಿಗಳ ನಡುವೆ ಅಗತ್ಯವಿರುವ ಅಂತರ್ ಸಂಪರ್ಕ ಒದಗಿಸಲು ಹಾಗೂ ಗಡಿ ಪ್ರದೇಶಗಳಿಗೆ ತ್ವರಿತ ಪ್ರವೇಶವನ್ನು ಕಲ್ಪಿಸಲು ಒಟ್ಟು 2,178 ಕಿಮೀ ಉದ್ದದ ಅಂತರ್​ಹೆದ್ದಾರಿ ಕಾರಿಡಾರ್​ಗಳನ್ನು ಕೂಡ ನಿರ್ವಿುಸಲಾಗುತ್ತಿದೆ.

ಸೆಲಾ ಸುರಂಗ:13 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ವಿಶ್ವದ ಅತಿ ಉದ್ದದ ದ್ವಿ-ಪಥದ ಸುರಂಗವಾದ ಸೆಲಾ ಸುರಂಗ ನಿರ್ಮಾಣ ಕಾಮಗಾರಿ ಈಗಾಗಲೇ ಸಾಗಿದೆ. 2.535 ಕಿಮೀ ಉದ್ದದ ಈ ಸುರಂಗವು ಪೂರ್ಣಗೊಂಡ ನಂತರ ಸಶಸ್ತ್ರ ಪಡೆಗಳ ಸಂಚಾರಕ್ಕೆ ಇನ್ನಷ್ಟು  ಅನುಕೂಲವಾಗಲಿದೆ. ಮುಂದಿನ ವರ್ಷ ಜನವರಿಯಲ್ಲಿ ಇದು ಉದ್ಘಾಟನೆಗೊಳ್ಳಲಿದ್ದು, ತವಾಂಗ್​ಗೆ ಎಲ್ಲ ಋತುಗಳಲ್ಲಿಯೂ ಸಂಪರ್ಕ ಒದಗಿಸುತ್ತದೆ. ಪ್ರಸ್ತುತ, ಸೇನೆ ಮತ್ತು ನಾಗರಿಕರು ಬಲಿಪರಾ-ಚರಿದುವಾರ್ ರಸ್ತೆ (ಅಸ್ಸಾಂ)ಯನ್ನು ಅರುಣಾಚಲದ ತವಾಂಗ್​ಗೆ ತಲುಪಲು ಬಳಸುತ್ತಾರೆ. ಏಕೆಂದರೆ ಚಳಿಗಾಲದಲ್ಲಿ ಸೆಲಾ ಪಾಸ್ ಅನ್ನು ಮುಚ್ಚಲಾಗುತ್ತದೆ. 317 ಕಿಮೀ ಉದ್ದದ ಬಲಿಪರಾ-ಚರ್ದುವಾರ್- ತವಾಂಗ್ ರಸ್ತೆಯಲ್ಲಿನ ನೆಚಿಪು ಸುರಂಗದ ಜತೆಗೆ ಈಗ ನಿರ್ವಿುಲಾಗುತ್ತಿರುವ ಆಯಕಟ್ಟಿನ ಸೆಲಾ ಸುರಂಗವು ರಕ್ಷಣಾ ಮತ್ತು ಖಾಸಗಿ ವಾಹನಗಳೆರಡೂ ವರ್ಷಪೂರ್ತಿ ಸಾಗಲು ಅನುವು ಮಾಡಿಕೊಡುತ್ತದೆ. ಸೆಲಾ ಸುರಂಗ ಯೋಜನೆಯು ತಲಾ 1,555 ಮೀ ಉದ್ದದ ಮುಖ್ಯ ಮತ್ತು ಎಸ್ಕೇಪ್ ಸುರಂಗಗಳನ್ನು ಹೊಂದಿದೆ. ಇದಲ್ಲದೆ, 980 ಮೀಟರ್​ನ ಒಂದು ಚಿಕ್ಕ ಸುರಂಗ ಮತ್ತು ಸುಮಾರು 1.2 ಕಿಮೀ ರಸ್ತೆ ಕೂಡ ಒಳಗೊಂಡಿದೆ. ಈ ಸುರಂಗವು ನಿರ್ವಣಗೊಂಡ ನಂತರದಲ್ಲಿ ಈ ಪ್ರದೇಶದಲ್ಲಿ ಚೀನಿಯರು ಭಾರತದಲ್ಲಿನ ಸೇನಾ ಚಲನೆಯ ಮೇಲೆ ನಿಗಾ ಇಡಲು ಸಾಧ್ಯವಾಗುವುದಿಲ್ಲ. ಸದ್ಯ ಸೆಲಾ ಪಾಸ್ ಚೀನಿಯರಿಗೆ ಗೋಚರಿಸುವಂತಿದೆ. ಟ್ಯಾಂಕ್​ಗಳು, ವಜ್ರ ಹೊವಿಟ್ಜರ್​ಗಳು ಸೇರಿದಂತೆ ಸೇನೆಯ ಎಲ್ಲ ಉಪಕರಣಗಳು ಹಾದುಹೋಗುವ ರೀತಿಯಲ್ಲಿ ಸುರಂಗವನ್ನು ವಿನ್ಯಾಸಗೊಳಿಸಲಾಗಿದೆ. ವರ್ಷವಿಡೀ ಸಂಚರಿಸಲು ಸಾಧ್ಯವಾಗುವುದರೊಂದಿಗೆ ಪ್ರಯಾಣದ ಸಮಯವನ್ನು ಕಡಿತಗೊಳಿಸುತ್ತದೆ. ಬಹುಮುಖ್ಯವಾಗಿ ಚೀನಿಯರ ಗೂಢಚಾರಿಕೆಯ ಕಣ್ಣುಗಳಿಗೆ ಕಾಣಿಸದಂತೆ ಮರೆಮಾಚುತ್ತದೆ.

ಸುಗಮ ಸಂಚಾರಕ್ಕೆ ಅನುಕೂಲ: ಸದ್ಯ ಕೇಂದ್ರ ಕಾನೂನು ಸಚಿವರಾಗಿರುವ ಕಿರಣ್ ರಿಜಿಜು 2014ರಲ್ಲಿ ಗೃಹ ಖಾತೆ ರಾಜ್ಯ ಸಚಿವರಾಗಿದ್ದಾಗ ಮತ್ತು ಗಡಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾಗ ಈ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಅದೇ ವರ್ಷ ಗೃಹ ಸಚಿವಾಲಯವು ವಿವರ ಯೋಜನಾ ವರದಿ ತಯಾರಿಸಲು ರಸ್ತೆ ಮತ್ತು ಹೆದ್ದಾರಿ ಸಚಿವಾಲಯವನ್ನು ಕೇಳಿಕೊಳ್ಳುವ ಮೂಲಕ ಈ ಯೋಜನೆಗೆ ಚಾಲನೆ ದೊರೆಯಿತು. ಬಾರ್ಡರ್ ರೋಡ್ಸ್ ಆರ್ಗನೈಜೇಷನ್, ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಸೇರಿದಂತೆ ಅನೇಕ ಅನೇಕ ಸಂಸ್ಥೆಗಳು ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿವೆ. ಅರುಣಾಚಲ ಫ್ರಂಟಿಯರ್ ಹೆದ್ದಾರಿಯು ಸೇನೆಗೆ ಬೃಹತ್ ಸಾಮರ್ಥ್ಯವನ್ನು ತಂದುಕೊಡುವ ನಿರೀಕ್ಷೆ ಇದೆ. ಏಕೆಂದರೆ, ಅಗತ್ಯವಿರುವಾಗ ಗಡಿಗೆ ಸೈನಿಕರನ್ನು ಮತ್ತು ಉಪಕರಣಗಳನ್ನು ಯಾವುದೇ ಅಡತಡೆ ಇಲ್ಲದೆ ಮತ್ತು ವೇಗವಾಗಿ ಸಾಗಿಸಲು ಇದು ಅನುವು ಮಾಡಿಕೊಡಲಿದೆ. ಉದ್ದೇಶಿತ ಹೆದ್ದಾರಿ ಮತ್ತು ಚಾಲ್ತಿಯಲ್ಲಿರುವ ಇತರ ಯೋಜನೆಗಳು ಒಂದು ಕಣಿವೆಯಿಂದ ಮತ್ತೊಂದು ಕಣಿವೆಗೆ ಚಲಿಸುವ ಸೇನೆಯ ಸಾಮರ್ಥ್ಯಕ್ಕೆ ಭಾರಿ ಅನುಕೂಲ ಕಲ್ಪಿಸಲಿವೆ.

ದುರ್ಗಮ ಪ್ರದೇಶ: ಚೀನಿಯರು ತಮ್ಮ ಬದಿಯಲ್ಲಿ ಮೂಲಸೌಕರ್ಯಗಳನ್ನು ನಿರ್ವಿುಸುವ ವೇಗಕ್ಕೆ ಸರಿಸಮನಾಗಿರುವಂತೆ ಪ್ರಯತ್ನಗಳನ್ನು ಮಾಡುವುದರೊಂದಿಗೆ ಹೆಚ್ಚಿನ ಸಂಖ್ಯೆಯ ವಿಶೇಷ ಮತ್ತು ಅತ್ಯಾಧುನಿಕ ರಸ್ತೆ ಮತ್ತು ಸುರಂಗ ಸಾಧನಗಳನ್ನು ಈ ಕಾಮಗಾರಿಗೆ ಭಾರತ ಸರ್ಕಾರ ಒದಗಿಸುತ್ತಿದೆ. ‘ಎಲ್​ಎಸಿಯ ನಮ್ಮ ಬದಿಯಲ್ಲಿರುವ ಸಮಸ್ಯೆಯೆಂದರೆ, ಚೀನಾ ಬದಿಯಲ್ಲಿರುವಂತೆ ಸಮತಟ್ಟಾದ ಭೂಪ್ರದೇಶ ಇಲ್ಲಿಲ್ಲ. ಹಲವಾರು ಸ್ಥಳಗಳಿಗೆ ಸುರಂಗ ಮಾರ್ಗದ ಅಗತ್ಯವಿರುವ ಭೂಪ್ರದೇಶವು ದುರ್ಗಮವಾಗಿದೆ. ಆದರೆ, ಈಗ ಚೀನೀಯರ ಬಳಿ ಇರುವ ಉಪಕರಣಗಳು ನಮ್ಮ ಬಳಿಯೂ ಇವೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

1962ರಲ್ಲಿ ನಡೆದಿದ್ದು (ಭಾರತ- ಚೀನಾ ಯುದ್ಧ) ಇತಿಹಾಸವಾಗಿದ್ದು, ಎಂದಿಗೂ ಪುನರಾವರ್ತನೆಯಾಗುವುದಿಲ್ಲ. 1962ರಲ್ಲಿ ಸನ್ನಿವೇಶವು ವಿಭಿನ್ನವಾಗಿತ್ತು. ನಮ್ಮ ಪ್ರದೇಶದಲ್ಲಿ ಮೂಲಸೌಕರ್ಯಗಳು ತುಂಬಾ ಕಳಪೆಯಾಗಿದ್ದವು. ಅದರ ಹೊರತಾಗಿಯೂ ಭಾರತೀಯ ಸೇನೆ ಕೆಚ್ಚೆದೆಯಿಂದ ಹೋರಾಡಿ ಮಾತೃಭೂಮಿಯನ್ನು ರಕ್ಷಿಸಲು ಸಾವಿರಾರು ಜೀವಗಳನ್ನು ಬಲಿಕೊಟ್ಟಿತು. ಆದರೆ, ಇಂದು ನಾವು 1962ರಲ್ಲಿ ಇದ್ದಂತೆ ಇಲ್ಲ. | ಪೆಮಾ ಖಂಡು ಅರುಣಾಚಲ ಪ್ರದೇಶ ಮುಖ್ಯಮಂತ್ರಿ

ತ್ವರಿತಗತಿಯಲ್ಲಿ ಕಾರ್ಯ: ಚೀನಾವನ್ನು ಎದುರಿಸುವ ದೃಢ ನಿಲುವಿನೊಂದಿಗೆ ಭಾರತವು ಈಶಾನ್ಯ ರಾಜ್ಯಗಳಲ್ಲಿ, ಅದರಲ್ಲೂ ಪ್ರಮುಖವಾಗಿ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಬೃಹತ್ ಮೂಲಸೌಕರ್ಯ ಕಲ್ಪಿಸಲು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಲ್​ಎಸಿವರೆಗಿನ ಸುರಂಗಗಳು, ಹೆದ್ದಾರಿಗಳು ಮತ್ತು ಫೀಡರ್ ರಸ್ತೆಗಳಿಗೆ ಭಾರವಾದ ಉಪಕರಣಗಳನ್ನು ಸಾಗಿಸಲು ಅಗತ್ಯವಿರುವ ಸೇತುವೆಗಳ ನಿರ್ವಣವನ್ನು ತ್ವರಿತಗೊಳಿಸಿದೆ.

ಚೀನಾ ವಿರೋಧ: ಫ್ರಂಟಿಯರ್ ಹೆದ್ದಾರಿ ನಿರ್ವಣಕ್ಕೆ ಈ ಹಿಂದೆಯೇ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಈ ಪ್ರಸ್ತಾವನೆಗೆ ಭಾರತದ ಪ್ರಧಾನಮಂತ್ರಿಗಳ ಕಚೇರಿಯಿಂದ ಪ್ರಾಥಮಿಕ ಒಪ್ಪಿಗೆ ದೊರೆತಿದೆ ಎಂಬ ವರದಿಗಳು ಬಂದ ನಂತರ ಚೀನಾ 2014ರಲ್ಲಿ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿತ್ತು.

ಅರುಣಾಚಲಕ್ಕೆ ಸಿಂಹಪಾಲು: ಈ ತಿಂಗಳ ಆರಂಭದಲ್ಲಿ ಈಶಾನ್ಯ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಘೊಷಿಸಿದ 1.6 ಲಕ್ಷ ಕೋಟಿ ರೂಪಾಯಿ ಮೊತ್ತದ ಒಟ್ಟು ಹೆದ್ದಾರಿ ಯೋಜನೆಗಳ ಪೈಕಿ ಅರುಣಾಚಲ ಪ್ರದೇಶವು 44,000 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳೊಂದಿಗೆ ಸಿಂಹಪಾಲು ಪಡೆದಿದೆ. ಅರುಣಾಚಲ ಪ್ರದೇಶದಲ್ಲಿ ಎಲ್​ಎಸಿ ಭಾಗವನ್ನು ಸಂಪೂರ್ಣ ಒಳಗೊಂಡಿರುವ ಫ್ರಂಟಿಯರ್ ಹೆದ್ದಾರಿ ಯೋಜನೆ ಹಾಗೂ ಅಂತರ್ ಹೆದ್ದಾರಿ ಕಾರಿಡಾರ್​ಗಳ ನಿರ್ವಣಕ್ಕೆ 40 ಸಾವಿರ ಕೋಟಿ ರೂ. ವ್ಯಯಿಸಲಾಗುತ್ತಿದೆ.

ತವಾಂಗ್ ಮೇಲೆ ಚೀನಾ ಕಣ್ಣು: ಮ್ಯಾಕ್ ಮಹೊನ್ ರೇಖೆಯು ಭಾರತ ಮತ್ತು ಚೀನಾ ನಡುವಿನ ಸ್ಪಷ್ಟ ಗಡಿ ರೇಖೆಯನ್ನು ವ್ಯಾಖ್ಯಾನಿಸುತ್ತದೆ. ಈ ರೇಖೆಯನ್ನು ಬ್ರಿಟಿಷ್ ಭಾರತ ಸರ್ಕಾರದಲ್ಲಿ ಆಗಿನ ವಿದೇಶಾಂಗ ಕಾರ್ಯದರ್ಶಿ ಸರ್ ಹೆನ್ರಿ ಮ್ಯಾಕ್ ಮಹೊನ್ ನಿರ್ಧರಿಸಿದ್ದರಿಂದ ಅವರ ಹೆಸರನ್ನೇ ಇಡಲಾಗಿದೆ. ಶಿಮ್ಲಾ ಒಪ್ಪಂದದ ಅನುಸಾರ 1914ರಲ್ಲಿ ಟಿಬೆಟ್ ಮತ್ತು ಬ್ರಿಟನ್ ನಡುವೆ ಮಾತುಕತೆ ನಡೆದು ಗಡಿ ರೇಖೆಯನ್ನು ನಿರ್ಧರಿಸಲಾಗಿತ್ತು. ಇದು 890 ಕಿಲೋಮೀಟರ್ ಉದ್ದದ ಗಡಿ ರೇಖೆಯಾಗಿದೆ. ಈ ಒಪ್ಪಂದದ ಅನುಸಾರ ಅರುಣಾಚಲ ಪ್ರದೇಶದ ತವಾಂಗ್ ಮತ್ತು ಟಿಬೆಟ್​ನ ದಕ್ಷಿಣ ಪ್ರದೇಶವನ್ನು ಭಾರತದ ಭಾಗವೆಂದು ಪರಿಗಣಿಸಲಾಯಿತು. ಟಿಬೆಟಿಯನ್ನರು ಸಹ ಇದನ್ನು ಒಪ್ಪಿಕೊಂಡರು.

1950ರಲ್ಲಿ ಟಿಬೆಟನ್ನು ಚೀನಾ ಆಕ್ರಮಿಸಿತು. ಶಿಮ್ಲಾ ಒಪ್ಪಂದಲ್ಲಿ ತಾನು ಪಾಲ್ಗೊಂಡಿಲ್ಲವಾದ್ದರಿಂದ ಮೆಕ್ ಮಹೊನ್ ಗಡಿರೇಖೆಯನ್ನು ಒಪ್ಪುವುದಿಲ್ಲ ಎಂಬುದು ಚೀನಾದ ತಗಾದೆಯಾಗಿದೆ. ಅರುಣಾಚಲ ಪ್ರದೇಶದ ತವಾಂಗ್ ಭಾಗವು ದಕ್ಷಿಣ ಟಿಬೆಟ್ ಆಗಿದ್ದು, ಅದು ತನಗೆ ಸೇರಬೇಕು ಎಂದು ವಾದಿಸುತ್ತದೆ. ಆದರೆ, ಶಿಮ್ಲಾ ಒಪ್ಪಂದ ಏರ್ಪಟ್ಟಾಗ ಟಿಬೆಟ್ ಸ್ವತಂತ್ರ ರಾಷ್ಟ್ರವಾಗಿದ್ದು, ಚೀನಾದ ಆಡಳಿತ ಅಲ್ಲಿರಲಿಲ್ಲ. ಹೀಗಾಗಿ, ಮ್ಯಾಕ್ ಮಹೊನ್ ರೇಖೆಯೇ ಚೀನಾ- ಭಾರತದ ನಡುವಿನ ಅಧಿಕೃತ ಗಡಿಯಾಗಿದೆ. ಇದೇ ವಾಸ್ತವ ಗಡಿ ನಿಯಂತ್ರಣ ರೇಖೆ (ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ -ಎಲ್​ಎಸಿ) ಎಂದು ಭಾರತ ಪ್ರತಿಪಾದಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net