

ಬೆಂಗಳೂರು: ಇನ್ನು ಮುಂದೆ ಯಾವುದೇ ಕಾರಣಕ್ಕೂ ಲಾಕ್ಡೌನ್ ಬಗ್ಗೆ ಚರ್ಚಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
‘ಜನಸ್ನೇಹಿ ಆಡಳಿತದ 1 ವರ್ಷ: ಸವಾಲುಗಳ ವರ್ಷ – ಪರಿಹಾರದ ಸ್ಪರ್ಶ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈಗಾಗಲೇ ಸುಮಾರು 45 ದಿನಗಳ ಲಾಕ್ಡೌನ್ ಮಾಡಲಾಗಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಲಾಕ್ಡೌನ್ ಬಗ್ಗೆ ಮಾತನಾಡುವುದೇ ಇಲ್ಲ. ಈಗಾಗಲೇ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಕರೊನಾ ಬಗ್ಗೆ ಹೆಚ್ಚಿನ ಗಮನವಹಿಸಲು ಸೂಚಿಸಿದ್ದೇನೆ ಎಂದರು.
ಕರೊನಾ ಜತೆ-ಜತೆಯೇ ನಾವು ಬದುಕಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕು. ಆ ಮೂಲಕ ಆರ್ಥಿಕ ಕ್ರೂಢೀಕರಣಕ್ಕೆ ಆದ್ಯತೆ ನೀಡಬೇಕಿದೆ ಎಂದು ಹೇಳುವ ಮೂಲಕ ಇನ್ನು ಮುಂದೆ ಲಾಕ್ಡೌನ್ ಇರುವುದಿಲ್ಲ ಎಂಬುದರ ಸೂಚನೆ ನೀಡಿದರು.
ಬೆಂಗಳೂರು ಅಭಿವೃದ್ಧಿಗೆ ಈಗಾಗಲೇ ನೀಲಿ ನಕ್ಷೆ ಸಿದ್ಧಪಡಿಸಿದ್ದೇವೆ. ಹೊಸ ಕೈಗಾರಿಕಾ ನೀತಿ ಜಾರಿ ಮಾಡಲಾಗುತ್ತಿದೆ. ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ೧೦೮ ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ವಿಮಾನ ನಿಲ್ದಾಣದ ಬಳಿ ನಿರ್ಮಾಣ ಮಾಡಲಾಗುತ್ತಿದೆ. ದಿವಂಗತ ಅನಂತಕುಮಾರ್ ಕನಸಿನ ಸಬರ್ಬನ್ ರೈಲು ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ರಸ್ತೆಗಳ ಅಭಿವೃದ್ಧಿ ಹಾಗೂ ೯೭೦ ಕಿಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು. (ದಿಗ್ವಿಜಯ ನ್ಯೂಸ್)