

ಸಾಮಾನ್ಯವಾಗಿ ಹಿರಿತೆರೆ ಮತ್ತು ಕಿರುತೆರೆಗಳ ಮುಸುಕಿನ ಗುದ್ದಾಟ, ಜಗಳ, ದ್ವೇಷದ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತದೆ. ಒಳ್ಳೆಯ ಸ್ನೇಹದ ಬಗ್ಗೆ ಚರ್ಚೆಯಾಗುವುದು ಬಹಳ ಕಡಿಮೆಯೇ. ಸೆಲೆಬ್ರಿಟಿಗಳು ಹೆಚ್ಚು ಜನರ ಜತೆ ಸೇರದಿದ್ದರೂ, ಅವರಿಗೆ ಅವರದ್ದೇ ಆದ ಗೆಳೆಯರ ವೃಂದವಿರುತ್ತದೆ. ಅವರು ವೃತ್ತಿಗೆ ಸೇರಿದವರೂ ಇರಬಹುದು, ಬೇರೆ ವೃತ್ತಿಯವರೂ ಆಗಿರಬಹುದು. ಈ ಬಾರಿಯ ವಿಶ್ವ ಸ್ನೇಹ ದಿನಕ್ಕಾಗಿ ಒಂದಿಷ್ಟು ಸೆಲೆಬ್ರಿಟಿಗಳು ತಮ್ಮ ಕುಚ್ಚಿಕು ಕುಚ್ಚಿಕೂ ಸ್ನೇಹಿತರ ಬಗ್ಗೆ ಮಾತಾಡಿದ್ದಾರೆ.
ನಾನು ‘ಪಾರು’ ಧಾರಾವಾಹಿಗೆ ಆಯ್ಕೆಯಾಗಲು ಮುಖ್ಯ ಕಾರಣ ನಿರ್ಮಾಪಕಿ ವಿದ್ಯಾ. ನಟನೆಯ ಗಂಧ-ಗಾಳಿ ಗೊತ್ತಿಲ್ಲದ ನನ್ನನ್ನು ಕರೆತಂದು ನಟನೆ ಕಲಿಸಿದರು. ನನ್ನ ಕೈಯಲ್ಲಿ ಆಗಲ್ಲ ಎಂದಾಗ ಸ್ನೇಹಿತೆಯಂತೆ ಜತೆ ನಿಂತು ಎಲ್ಲವನ್ನೂ ಹೇಳಿಕೊಟ್ಟರು. ಡೇಟ್ಸ್ ಹೊಂದಾಣಿಕೆ ಇರಬಹುದು, ಸ್ನೇಹಿತರ ಜತೆ ಹೊರಗಡೆ ಹೋಗಬೇಕೆಂದಾಗ ಅವರ ಬಳಿಯೇ ನಾನು ಎಲ್ಲವನ್ನೂ ಪ್ರಸ್ತಾಪಿಸುತ್ತಿದ್ದೆ. ನಟನೆ ಜತೆಗೆ ಬೇರೆಬೇರೆ ವಿಷಯಗಳನ್ನು ಅವರು ಹೇಳಿಕೊಟ್ಟಿದ್ದಾರೆ. ಕಾರ್ಯಕ್ರಮಗಳಿಗೆ ಹೋದಾಗ ಆಗಿನ ಪರಿಸ್ಥಿತಿಯನ್ನು ಹೇಗೆ ಹ್ಯಾಂಡಲ್ ಮಾಡಬೇಕು, ಅಲ್ಲಿನ ನಾವು ಹೇಗಿರಬೇಕು ಮುಂತಾದ ಹಲವು ವಿಷಯ ತಿಳಿಸಿಕೊಟ್ಟಿದ್ದಾರೆ. ಎಲ್ಲಾ ಧಾರಾವಾಹಿಗಳಿಗೂ ನಿರ್ಮಾಪಕಿಯರೇ ಇದ್ದರೆ, ನಟಿಯರಿಗೆ ಅದರಿಂದ ತುಂಬ ಅನುಕೂಲ ಎನ್ನುವುದು ಮೋಕ್ಷಿತಾ ಪೈ ಅಭಿಪ್ರಾಯ.