

ಹೈದ್ರಾಬಾದ್: ಕಾಶೀ ಜ್ಞಾನ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ 79ನೇ ಜನ್ಮ ವರ್ಧಂತಿ ಮಹೋತ್ಸವವು ತೆಲಂಗಾಣದ ಸದಾಶಿವಪೇಟದ ಚೌಕಿಮಠದಲ್ಲಿ ಶುಕ್ರವಾರ (ಆ.8) ನಡೆಯಲಿದೆ. ಸಂಜೆ 5 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ನವನಗರ ಶ್ರೀರಾಜಶೇಖರ ಶಿವಾಚಾರ್ಯರು, ವಿಮಲಖೇಡ ಹಿರೇಮಠದ ಡಾ. ರಾಜಶೇಖರ ಶಿವಾಚಾರ್ಯರು, ಮಹಾರಾಷ್ಟ್ರ ಬಾರ್ಸಿ ಹಿರೇಮಠದ ಶ್ರೀಗುರುಸಿದ್ಧ ಮಣಿಕಂಠ ಶಿವಾಚಾರ್ಯರು, ತೆಲಂಗಾಣ ಬಿಚಗುಂದ ಸಂಸ್ಥಾನಮಠದ ಶ್ರೀಸೋಮಲಿಂಗ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಾಧೀಶರು, ಗಣ್ಯರು ಪಾಲ್ಗೊಂಡು ಗುರುವಂದನೆ ಸಲ್ಲಿಸಲಿದ್ದಾರೆ.
ಕಾಶೀ ಪೀಠದ 86ನೆಯ ಪೀಠಾಚಾರ್ಯರಾಗಿರುವ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕನ್ನಡ, ಸಂಸ್ಕೃತ, ಹಿಂದಿ, ಮರಾಠಿ ಹೀಗೆ ಬಹುಭಾಷಾ ವಿದ್ವಾಂಸರಾಗಿದ್ದು, ವೀರಶೈವ ದಾರ್ಶನಿಕ ಸಾಹಿತ್ಯ ಮತ್ತು ಸಿದ್ಧಾಂತವನ್ನು ವಿಶ್ವದಾದ್ಯಂತ ಪ್ರಸಾರ ಮಾಡಿದ್ದಾರೆ. ವೀರಶೈವ ತತ್ವಶಾಸ್ತ್ರದಲ್ಲಿ ಮನುಕುಲದ ವಿಕಾಸದ ಆಶಯಗಳಿಗೆ ಆಕರದಂತಿರುವ ‘ಶ್ರೀಸಿದ್ಧಾಂತ ಶಿಖಾಮಣಿ’ ಕೃತಿಯನ್ನು 20 ಭಾಷೆಗಳಿಗೆ ಭಾಷಂತರಿಸಿದ ಕೀರ್ತಿ ಜಗದ್ಗುರುಗಳಿಗೆ ಸಲ್ಲುತ್ತದೆ.