ಕೃಷಿ ಅಗತ್ಯಕ್ಕೆ ಉಚಿತ ವಿದ್ಯುತ್ ಸ್ಥಗಿತ : ಪ್ರತಿಭಟನೆಗಿಳಿದ ಕಿಸಾನ್ ಸೇನೆ : 10ರಂದು ಪುತ್ತಿಗೆ ಕೃಷಿ ಭವನಕ್ಕೆ ಮೆರವಣಿಗೆ

Published on

ವಿಜಯವಾಣಿ ಸುದ್ದಿಜಾಲ ಕುಂಬಳೆ

ಕೃಷಿ ಅಗತ್ಯಕ್ಕೆ ನದಿಯಿಂದ ನೀರೆತ್ತುವುದನ್ನು ನಿರ್ಬಂಧಿಸುವ, ಉಚಿತ ವಿದ್ಯುತ್ ನಿಲ್ಲಿಸುವ ಕ್ರಮ ರೈತ ಸಮುದಾಯಕ್ಕೆ ಗಂಭೀರ ಸವಾಲಾಗಿದೆ. ರೈತ ವಿರೋಧಿ ಕ್ರಮಗಳು ಮುಂದುವರಿಯುತ್ತಿರುವುದು ಖಂಡನಾರ್ಹ. ಈ ನಿಟ್ಟಿನಲ್ಲಿ ಕಿಸಾನ್ ಸೇನೆ ಪುತ್ತಿಗೆ ಪಂಚಾಯಿತಿ ಸಮಿತಿ ಪ್ರತಿಭಟನೆಗೆ ಇಳಿದಿದೆ ಎಂದು ಪದಾಧಿಕಾರಿಗಳು ತಿಳಿಸಿದರು.

ಕೃಷಿ ಅಗತ್ಯಕ್ಕೆ ನದಿಯಿಂದ ಮೋಟಾರ್ ಬಳಸಿ ನೀರು ಬಳಸಬಾರದು. ಕೊಳವೆ ಬಾವಿಗಳಿಂದ ನೀರನ್ನು ಕೃಷಿಗೆ ಬಳಸಿದರೆ ಉಚಿತ ವಿದ್ಯುತ್ ಲಭ್ಯವಿರುವುದಿಲ್ಲ ಎಂಬ ಸರ್ಕಾರದ ಅಪ್ರಬುದ್ಧ ನಡೆಗಳು ರೈತರಿಗೆ ಕರಾಳ ಕಾನೂನಾಗಿವೆ. ಇನ್ನೂರಕ್ಕೂ ಹೆಚ್ಚು ರೈತರನ್ನು ಉಚಿತ ವಿದ್ಯುತ್ ಯೋಜನೆಯಿಂದ ಹೊರಗಿಟ್ಟ ಪುತ್ತಿಗೆ ಕೃಷಿ ಭವನ ಕ್ರಮದ ವಿರುದ್ಧ ಪುತ್ತಿಗೆ ಪಂಚಾಯಿತಿ ಕಿಸಾನ್ ಸೇನಾ ಸಮಿತಿ ನೇತೃತ್ವದಲ್ಲಿ ಜುಲೈ 10ರಂದು ಬೆಳಗ್ಗೆ 10.30ಕ್ಕೆ ಕಟ್ಟತ್ತಡ್ಕದಿಂದ ಪುತ್ತಿಗೆ ಕೃಷಿ ಭವನಕ್ಕೆ ಸಾಮೂಹಿಕ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಕುಂಬಳೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಿಸಾನ್ ಸೇನಾ ಜಿಲ್ಲಾ ಕಾರ್ಯದರ್ಶಿ ಶುಕೂರ್ ಕೇನಾಜೆ, ಕಿಸಾನ್ ಸೇನೆಯ ಪುತ್ತಿಗೆ ಪಂಚಾಯಿತಿ ಘಟಕದ ಅಧ್ಯಕ್ಷ ಪಿ.ಅಬ್ದುಲ್ಲ ಕಂಡತ್ತಿಲ್, ಪ್ರಧಾನ ಕಾರ್ಯದರ್ಶಿ ಸುರೇಶ್ ಪಿ.ಎ.ಅಡ್ಕತೊಟ್ಟಿ, ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಚೆಕ್ಕಣಿಗೆ, ಜತೆ ಕಾರ್ಯದರ್ಶಿ ಪ್ರಸಾದ್ ಕಕ್ಕೆಪ್ಪಾಡಿ ಇದ್ದರು.

ಪ್ರತಿಭಟನಾ ಮೆರವಣಿಗೆ

ಕೃಷಿ ಭವನವೇ ರೈತರ ವಿದ್ಯುತ್ ಬಾಕಿ ಪಾವತಿಸಬೇಕು. ಸರ್ಕಾರದ ಸುತ್ತೋಲೆಗೆ ಹೆದರಿ ಈಗಾಗಲೇ ಬಾಕಿ ಪಾವತಿಸಿದ ರೈತರಿಗೆ ಹಣ ಮರು ಪಾವತಿಸಬೇಕು. ಉಚಿತ ವಿದ್ಯುತ್ ಯೋಜನೆಯಲ್ಲಿ ಹೊರಗಿಡಲಾದ ರೈತರನ್ನು ಸೇರಿಸಬೇಕು. ಕೃಷಿ ಅಗತ್ಯಗಳಿಗೆ ಮೋಟಾರ್ ಬಳಸಿ ನದಿಯಿಂದ ನೀರು ಬಳಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಈ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿದೆ. ಜಿಲ್ಲೆಯ ಶಾಸಕರು, ಕೃಷಿ ಸಚಿವರು ರೈತರ ಸಮಸ್ಯೆ ಪರಿಹರಿಸಬೇಕೆಂದು ಕಿಸಾನ್ ಸೇನಾ ಪದಾಧಿಕಾರಿಗಳು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net