

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಪರಿಸರ ದಿನಾಚರಣೆಯ ಮೂಲಕ ಪರಿಸರವನ್ನು ಉಳಿಸಿ, ಬೆಳೆಸುವ ಕೆಲಸವಾಗಬೇಕು. ಇಂತಹ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನವು ಪರಿಸರವನ್ನು ಪೋಷಿಸುವಂತ ಕೆಲಸ ಆಗಬೇಕು. ಜಗದ ಪ್ರತಿಯೊಬ್ಬನಿಗೂ ಪರಿಸರ ಅತ್ಯಮೂಲ್ಯ ಮತ್ತು ಅತ್ಯಗತ್ಯ. ಪ್ರಕೃತಿಯಿಂದ ನಮಗೆ ಉಪಯೋಗವಿದೆ, ಗಾಳಿ, ನೆರಳು, ಹೀಗೆ ವಿವಿಧ ರೀತಿಯಲ್ಲಿ ಪರಿಸರವು ನಮಗೆ ಸಹಕಾರಿಯಾಗಿದೆ ಎಂದು ಬಂಟ್ವಾಳದ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಹೇಳಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಾಜೆ ಇಲ್ಲಿ ಯುವವಾಹಿನಿ ಮಾಣಿ ಘಟಕ ಆತಿಥ್ಯದಲ್ಲಿ ಅರಣ್ಯ ಇಲಾಖೆ ಬಂಟ್ವಾಳ ವಲಯದ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಹಸಿರು ವನ ಸಂತೃಪ್ತ ಮನ ಹಾಗೂ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋನಪ್ಪ ಸಾಲ್ಯಾನ್ ಉದ್ಘಾಟಿಸಿದರು. ಘಟಕದ ಗೌರವ ಸಲಹೆಗಾರ ನಾರಾಯಣ ಸಾಲ್ಯಾನ್ ಅತಿಥಿಯಾಗಿ ಭಾಗವಹಿಸಿದರು.
ಒಂದನೇ ತರಗತಿಯಿಂದ ಏಳನೆ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ವಿತರಿಸಲಾಯಿತು. ಮಕ್ಕಳ ಪಾಲಕರಿಗೆ ಗಿಡ ನೀಡಲಾಯಿತು. ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ಕೊಂಕಣಪದವು ಬಂಟ್ವಾಳ ವಲಯ ಉಪ ಅರಣ್ಯಾಧಿಕಾರಿ ರವಿರಾಜ್ ಬಿ., ಪೆರಾಜೆ ಗ್ರಾಪಂ ಅಧ್ಯಕ್ಷ ಕುಶಾಲಪ್ಪ ಎಂ. ಪೆರಾಜೆ, ಘಟಕದ ಸಮಾಜ ಸೇವಾ ನಿರ್ದೇಶಕ ಸತೀಶ್ ಬಾಬಣಕಟ್ಟೆ ಉಪಸ್ಥಿತರಿದ್ದರು.
ಶಾಲೆಯ ಮುಖ್ಯಶಿಕ್ಷಕಿ ಯಶೋಧ ಸ್ವಾಗತಿಸಿದರು, ಘಟಕದ ಕಾರ್ಯದರ್ಶಿ ಶಾಲಿನಿ ಜಗದೀಶ್ ವಂದಿಸಿದರು, ಮಾಜಿ ಕಾರ್ಯದರ್ಶಿ ಸಚಿನ್ ಪೆರಾಜೆ ನಿರೂಪಿಸಿದರು.