

ಪಡುಬಿದ್ರಿ: ಮುಂಬೈನ ಸೈಬರ್ ಪೊಲೀಸರೆಂದು ನಂಬಿಸಿದ ವಂಚಕರು ಮಂಗಳೂರು ಫಳ್ನೀರಿನ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಕಾಪು ಕೊಪ್ಪಲಂಗಡಿ ಮಹಿಳೆಯ ಐಸಿಐಸಿಐ ಬ್ಯಾಂಕ್ ಖಾತೆಯಿಂದ 4,80,000 ರೂ. ಅನ್ನು ಆನ್ಲೈನ್ ಮೂಲಕ ಬೇರೆ ಬೇರೆ ಖಾತೆಗೆ ವರ್ಗಾಯಿಸಿ ವಂಚನೆ ಮಾಡಿದ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬುಧವಾರ ಮಹಿಳೆಯೊಬ್ಬರು ಮುಂಬೈನ ಫೆಡೆಕ್ಸ್ ಕೊರಿಯರ್ನಿಂದ ಕರೆ ಮಾಡಿರುವುದಾಗಿ ಹೇಳಿ ನೀವು ಆ.12ರಂದು ಮುಂಬೈನ ರಫೀಕ್ ಎಂಬುವರಿಗೆ ಕಳುಹಿಸಿದ್ದ ಕೊರಿಯರ್ನಲ್ಲಿದ್ದ ಡ್ರಗ್ಸ್ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದರು. ಬಳಿಕ ಸೈಬರ್ ಪೊಲೀಸರೆಂದು ಹೇಳಿ ಕರೆ ಮಾಡಿದ್ದ ವ್ಯಕ್ತಿ ಟೆಲಿಗ್ರಾಂ ಆ್ಯಪ್ ಡೌನ್ಲೋಡ್ ಮಾಡುವಂತೆ ಹೇಳಿದ್ದರು. ಅದರಂತೆ ಟೆಲಿಗ್ರಾಂ ಆ್ಯಪ್ ಡೌನ್ಲೋಡ್ ಮಾಡಿ ಓಪನ್ ಮಾಡಿದಾಗ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಭಾವಚಿತ್ರ ಇರುವ ಗುರುತು ಕಾರ್ಡ್ ಕಳುಹಿಸಿದ್ದರು ಮತ್ತು ಕಳುಹಿಸಿದ್ದ ಕೊರಿಯರ್ ಬಗ್ಗೆ ತನಿಖೆ ಆರಂಭವಾಗುತ್ತದೆ ಎಂದು ಕರೆ ಕಡಿತ ಮಾಡದಂತೆ ಹೆದರಿಸಿದ್ದರು. ನಂತರ ಅವರು ಕೇಳಿದಂತೆ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ನೀಡಿದ್ದರು. ವಂಚಕರು ಹೇಳಿದಂತೆ ಬೇರೆ ಬೇರೆ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದರು. ಅವರು ನೀಡಿದ್ದ ಬ್ಯಾಂಕ್ ಖಾತೆಯೊಂದಕ್ಕೆ ಹಣ ವರ್ಗಾವಣೆೆಯಾಗದಿದ್ದಾಗ ಬ್ಯಾಂಕ್ ಟೋಲ್ಫ್ರೀ ಸಂಖ್ಯೆಗೆ ಕರೆ ಮಾಡುತ್ತಿದ್ದ ವೇಳೆ ಗೆಳೆಯರೊಬ್ಬರು ವಿಚಾರಿಸಿದ್ದು, ಮೋಸ ಹೋಗಿರುವುದು ಗೊತ್ತಾಗಿದೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.