

ಕುಂದಾಪುರ: ಕೊರಗರಿಗೆ ಭೂಮಿ ನೀಡಲು ಪ್ರತ್ಯೇಕ ಪ್ರಕರಣ ಎಂದು ಪರಿಗಣಿಸಿ ಅರಣ್ಯ ಇಲಾಖೆ ವಿಶೇಷ ಅಭಿಯಾನ ನಡೆಸಿ ಜಂಟಿ ಸರ್ವೇ ನಡೆಸಿ ಹಕ್ಕುಪತ್ರ ನೀಡಬೇಕು. ಸಂಪೂರ್ಣ ಡೀಮ್ಡ್ ಅರಣ್ಯ ಎಂದಿದ್ದರೆ ಭೂಮಿ ನೀಡಲು ಇರುವ ಪರಿಹಾರೋಪಾಯಗಳ ಕುರಿತು ತಿಳಿಸಿದರೆ ಸರ್ಕಾರದ ಹಂತದಲ್ಲಿ ಮಾತನಾಡುವುದಾಗಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಇಲ್ಲಿನ ತಾಪಂನಲ್ಲಿ ಕೊರಗ ಸಮುದಾಯವರಿಗೆ ಭೂಮಿ ನೀಡುವ ಕುರಿತು ಮಂಗಳವಾರ ವಿಶೇಷ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊರಗ ಸಮುದಾಯದವರು ಸಮಸ್ಯೆ ಹೇಳಿಕೊಂಡಿದ್ದಾರೆ. ಅನೇಕ ವರ್ಷಗಳಿಂದ ನಿರ್ದಿಷ್ಟ ಭೂಮಿಯಲ್ಲಿ ವಾಸ ಮಾಡುತ್ತಿದ್ದು ಕೃಷಿ ಮಾಡುತ್ತಿದ್ದಾರೆ. ಸರ್ಕಾರದಿಂದ ಮನೆ ಮಂಜೂರಾಗಿದೆ. ಆದರೆ ಜಾಗದ ಹಕ್ಕುಪತ್ರ ಇಲ್ಲದೆ ಇತರ ಸವಲತ್ತು, ಅಭಿವೃದ್ಧಿ ಚಟುವಟಿಕೆಗೆ ಸಾಲ ದೊರೆಯುವುದಿಲ್ಲ. ಹಿಂದೊಮ್ಮೆ ಅಕ್ರಮ ಸಕ್ರಮದಲ್ಲಿ ನೀಡಿದ ಅರ್ಜಿಗಳೆಲ್ಲ ಡೀಮ್ಡ್ ಅರಣ್ಯ ಎಂದು ತಿರಸ್ಕೃತವಾಗಿದ್ದು ಈಗ ಹೊಸದಾಗಿ ಜಾಗ ಮಂಜೂರಿಗೆ ಹಳೇ ಅರ್ಜಿಯನ್ನೇ ಪರಿಗಣಿಸಿ ಮರುಪರಿಶೀಲನೆ ಮಾಡಿ ಅರಣ್ಯ ಇಲಾಖೆ ಅಭಿಪ್ರಾಯ ನೀಡಬೇಕು ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಮಾತನಾಡಿ, ಮೀಸಲು ಅರಣ್ಯ ಹಾಗೂ ವನ್ಯಜೀವಿ ಅರಣ್ಯದಲ್ಲಿ ಪರಿಶಿಷ್ಟ ಪಂಗಡದವರಿಗೆ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಹಕ್ಕುಪತ್ರ ನೀಡಲು ಅವಕಾಶ ಇದೆ. ಡೀಮ್ಡ್ ಅರಣ್ಯ ಮರುಪರಿಶೀಲನೆಗೆ ಒಳಪಡಿಸಲಾಗಿದ್ದು ಈಗ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ಮೂಲಕ ಅರಣ್ಯ ವಿರಹಿತಗೊಳಿಸಿ ಅಂತಹ ಜಾಗವನ್ನು ಅಕ್ರಮ ಸಕ್ರಮ ಮೂಲಕ ನೀಡಲು ಅವಕಾಶ ಇದೆ. ಹಾಗಾಗಿ ಅಂತಹ ಎಲ್ಲ ಪ್ರಕರಣಗಳನ್ನೂ ಮರುಪರಿಶೀಲಿಸಿ ಮಂಜೂರಿಗೆ ಅಭ್ಯಂತರ ಇಲ್ಲ ಎಂದು ಪ್ರಮಾಣಪತ್ರ ನೀಡಲಾಗುವುದು ಎಂದರು.
ತಹಸೀಲ್ದಾರ್ ಶೋಭಾಲಕ್ಷ್ಮೀ ಮಾತನಾಡಿ, ಅನೇಕ ಸಮಯಗಳಿಂದ ನನೆಗುದಿಗೆ ಬಿದ್ದಿದ್ದ ಕೊರಗರ ಜಾಗದ ಸಮಸ್ಯೆಗಳಿಗೆ ಪರಿಹಾರ ನೀಡಲು ಶಾಸಕರ ಸೂಚನೆಯಂತೆ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸಭೆ ಕರೆಯಲಾಗಿದೆ ಎಂದರು. ಗಣೇಶ ಕೊರಗ ಕುಂಭಾಶಿ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಹಕ್ಕುಪತ್ರ ನೀಡಿದರೆ ಅದರಿಂದ ಸರ್ಕಾರದ ಯಾವುದೇ ಸವಲತ್ತು ದೊರೆಯುವುದಿಲ್ಲ. ಬ್ಯಾಂಕ್ ಸಾಲ ಕೂಡ ದೊರೆಯುವುದಿಲ್ಲ. ಆದ್ದರಿಂದ ದರ್ಖಾಸು ಭೂಮಿ ನೀಡುವಂತೆ ಅಕ್ರಮ ಸಕ್ರಮ ಕಾಯ್ದೆಯಡಿ ನೀಡಬೇಕು ಎಂದರು.
ಕುಮಾರದಾಸ್ ಹಾಲಾಡಿ, ಕೊರಗರ ಭೂಮಿ ಸಮಸ್ಯೆಯನ್ನು ಪ್ರತ್ಯೇಕವಾಗಿ ಪರಿಗಣಿಸಿ ಹಕ್ಕುಪತ್ರ ನೀಡಬೇಕು ಎಂದರು.
ನಾಗರಾಜ್ ಕೊರಗ ಕುಂದಾಪುರ, ಪುರಸಭೆ ಸದಸ್ಯ ಪ್ರಭಾಕರ ವಿ., ಪುರಸಭೆ ವ್ಯಾಪ್ತಿಯ ಅಂಬೇಡ್ಕರ್ ಕಾಲನಿಯಲ್ಲಿ ಪರಂಬೋಕು ಸಮಸ್ಯೆಯಿಂದಾಗಿ ಇನ್ನೂ 6 ಕೊರಗ ಕುಟುಂಬಗಳಿಗೆ ಹಕ್ಕುಪತ್ರ ಲಭಿಸಿಲ್ಲ ಎಂದು ಗಮನಕ್ಕೆ ತಂದರು. ಹಾರ್ದಳ್ಳಿ ಮಂಡಳ್ಳಿಯ ಗಿರಿಜಾ, ಕೊರಗ ಭೂಮಿಗೆ ಕಾಯ್ದೆ ಇದ್ದರೂ ಪುಸ್ತಕಗಳಲ್ಲಷ್ಟೇ ಇದೆ ವಿನಾ ಜಾರಿಯಾಗುತ್ತಿಲ್ಲ ಎಂದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಪೂಜಾರಿ, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಕೆ.ಜಿ., ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ಉಪಸ್ಥಿತರಿದ್ದರು.