ಚಿನ್ನ ಮಾರಾಟ ಹೆಸರಲ್ಲಿ ವಂಚನೆ ಯತ್ನ

Huge Fraud
Published on

ಗುರುಪುರ: ಮನೆ ನಿರ್ಮಿಸಲು ಪಾಯ ತೆಗೆಯುವಾಗ ಚಿನ್ನದ ನಾಣ್ಯಗಳಿರುವ ಮಡಕೆ ಸಿಕ್ಕಿದ್ದು, ಅದನ್ನು ಮಾರಾಟ ಮಾಡಲು ಬಯಸಿದ್ದೇನೆ. ಅದಕ್ಕಾಗಿ ತಾವು ಅರ್ಧ ದಾರಿ ತನಕ ಬಂದರೆ ವ್ಯವಹಾರ ಕುದುರಿಸಬಹುದು ಎಂದು ಅಪರಿಚಿತನೋರ್ವ ಕುಲವೂರಿನ ರೈತ ಮುಖಂಡನಿಗೆ ಕರೆ ಮಾಡಿ ವಂಚಿಸಲು ಯತ್ನಿಸಿದ ಘಟನೆ ನಡೆದಿದೆ.

ತಾನು ಬಾಗಲಕೋಟೆ ಬಸಾಪುರ ನಿವಾಸಿ ರಮೇಶ್ ಎಂದು ಪರಿಚಯಿಸಿಕೊಂಡಿದ್ದ ಅಪರಿಚಿತ, ಊರಿನಲ್ಲಿ ವೃದ್ಧರೊಬ್ಬರಿಗೆ ಸರ್ಕಾರದ ಆಶ್ರಯ ಯೋಜನೆಯಲ್ಲಿ ಮನೆ ಮಂಜೂರಾಗಿದೆ. ಆ ಮನೆಗೆ ಪಾಯ ತೆಗೆಯುವಾಗ ಚಿನ್ನದ ನಾಣ್ಯವಿರುವ ಮಡಕೆ ಸಿಕ್ಕಿದೆ. ಇದನ್ನು ಗುಟ್ಟಾಗಿ ಮಾರಾಟ ಮಾಡಲು ನಿರ್ಧರಿಸಿದ್ದು, ತಾವು ಸೂಚಿಸಿದ ಸ್ಥಳಕ್ಕೆ ನಾಣ್ಯ ತರಲು ಸಿದ್ಧನಿದ್ದೇನೆ. ಚಿನ್ನದ ಅಸಲಿ ಪರೀಕ್ಷಿಸಿದ ಬಳಿಕ ವ್ಯವಹಾರ ಕುದುರಿಸೋಣ ಎಂದು ವಿಶ್ವಾಸ ಮೂಡಿಸುವ ರೀತಿಯಲ್ಲಿ ಮಾತನಾಡಿದ್ದಾನೆ.

ಈ ಕರೆ ಬಗ್ಗೆ ಅನುಮಾನಗೊಂಡ ರೈತ ಮುಖಂಡ ದಯಾನಂದ ಶೆಟ್ಟಿ ಅವರು ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದು, ತನಿಖೆಗಾಗಿ ಪೊಲೀಸರಿಗೆ ನೀಡಿದ್ದಾರೆ. ಇಂತಹ ಕರೆಗಳ ಬಗ್ಗೆ ಜಾಗ್ರತೆಯಿಂದಿರಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸಮಯಪ್ರಜ್ಞೆ ಮೆರೆದರು

ನಿಧಿ ಶೋಧದ ವೇಳೆ ಸಿಕ್ಕಿದ ಚಿನ್ನವನ್ನು ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ ಬೆಳ್ತಂಗಡಿ ತಾಲೂಕಿನ ಮೂವರನ್ನು ತುಮಕೂರಿಗೆ ಕರೆಸಿಕೊಂಡು ಕೊಲೆ ಮಾಡಿ, ಕಾರು ಸಮೇತ ಸುಟ್ಟು ಹಾಕಿದ್ದ ಘಟನೆ ಇತ್ತೀಚೆಗೆ ನಡೆದಿದ್ದು, ಇಂತದ್ದೊಂದು ಕೃತ್ಯಕ್ಕೆ ಜಾಲ ನಡೆಸಿದ ಪ್ರಯತ್ನ ದಯಾನಂದ ಶೆಟ್ಟಿ ಅವರ ಸಮಯಪ್ರಜ್ಞೆಯಿಂದಾಗಿ ತಪ್ಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net