

ನವದೆಹಲಿ: ಲಡಾಖ್ನ ಪೂರ್ವಭಾಗದಲ್ಲಿನ ವಾಸ್ತವ ಗಡಿರೇಖೆಯಲ್ಲಿ ಚೀನಾ ಯುದ್ಧೋನ್ಮಾದ ತೋರುತ್ತಿರುವಂತೆ ಭಾರತೀಯ ವಾಯುಪಡೆಯ ಬಲ ಹೆಚ್ಚಿಸುವ ಸಂತಸದ ಸುದ್ದಿಯೊಂದು ಕೇಳಿಬಂದಿದೆ. ಭಾರತ ಖರೀದಿಸಲು ಉದ್ದೇಶಿಸಿರುವ ರಫೇಲ್ ಯುದ್ಧವಿಮಾನಗಳನ್ನು ತ್ವರಿತವಾಗಿ ವಿತರಿಸಲು ಫ್ರಾನ್ಸ್ ಮುಂದಾಗಿರುವುದು ಈ ಸಂತಸಕ್ಕೆ ಕಾರಣವಾಗಿದೆ.
ಭಾರತೀಯ ವಾಯುಪಡೆಯ ಮನವಿ ಮೇರೆಗೆ ಆರು ರಫೇಲ್ ಯುದ್ಧವಿಮಾನಗಳನ್ನು ತ್ವರಿತವಾಗಿ ವಿತರಿಸಲು ಫ್ರಾನ್ಸ್ ನಿರ್ಧರಿಸಿದೆ. ಜುಲೈ 27ರಂದು ಈ ಯುದ್ಧವಿಮಾನಗಳು ಅಂಬಾಲಾ ವಾಯುನೆಲೆಗೆ ಬಂದಿಳಿಯಲಿರುವುದಾಗಿ ವಾಯುಪಡೆ ಮೂಲಗಳು ತಿಳಿಸಿವೆ.
ಪೂರ್ವನಿಗದಿತದಂತೆ ಫ್ರಾನ್ಸ್ ಜುಲೈ 27ರಂದು ನಾಲ್ಕು ರಫೇಲ್ ಯುದ್ಧವಿಮಾನಗಳನ್ನು ವಿತರಣೆ ಮಾಡಬೇಕಿತ್ತು. ಆದರೆ, ವಾಸ್ತವ ಗಡಿರೇಖೆಯ ಬಳಿ ತೀವ್ರ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ವಿಮಾನಗಳನ್ನು ವಿತರಿಸುವಂತೆ ವಾಯುಪಡೆ ಮನವಿ ಮಾಡಿಕೊಂಡಿತ್ತು ಎನ್ನಲಾಗಿದೆ. ಇದನ್ನು ಮನ್ನಿಸಿರುವ ಫ್ರಾನ್ಸ್ ನಾಲ್ಕರ ಜತೆಗೆ ಹೆಚ್ಚುವರಿಯಾಗಿ ಇನ್ನೆರಡು ಯುದ್ಧವಿಮಾನಗಳನ್ನು ವಿತರಿಸಲು ಮುಂದಾಗಿದೆ.
ಭಾರತಕ್ಕೆ ಕೊಡಬೇಕಿರುವ 36 ರಫೇಲ್ ಯುದ್ಧವಿಮಾನಗಳ ಪೈಕಿ 10 ಯುದ್ಧವಿಮಾನಗಳು ಈಗಾಗಲೆ ಡಸಾಲ್ಟ್ ಏವಿಯೇಷನ್ಸ್ನ ಮೆರಿಗ್ನಾಕ್ ಉತ್ಪಾದನಾ ಕೇಂದ್ರದಲ್ಲಿ ಸಿದ್ಧವಾಗಿ ನಿಂತಿವೆ. ಇವುಗಳಲ್ಲಿ ಆರು ಯುದ್ಧವಿಮಾನಗಳನ್ನು ಜುಲೈ ಕೊನೆಯ ವಾರದಲ್ಲಿ ಕೊಡಲಾಗುತ್ತಿದೆ. ಫ್ರಾನ್ಸ್ನಿಂದ ಈ ಯುದ್ಧವಿಮಾನಗಳನ್ನು ಭಾರತೀಯ ಪೈಲಟ್ಗಳೇ ಹಾರಿಸಿಕೊಂಡು ಬರಲಿದ್ದಾರೆ. ಯುಎಇಯ ಅಲ್ ಧಾಫ್ರಾ ವಾಯುನೆಲೆಯಲ್ಲಿ ಒಂದು ದಿನ ನಿಲುಗಡೆ ಮಾಡಿ, ಅವನ್ನು ಭಾರತಕ್ಕೆ ತರಲಾಗುವುದು ಎಂದು ಭಾರತೀಯ ವಾಯುಪಡೆಯ ಮೂಲಗಳು ಖಚಿತಪಡಿಸಿವೆ.
ಭಾರತೀಯ ವಾಯುಪಡೆಯ ಪೈಲಟ್ಗಳಿಗೆ ತರಬೇತಿ ನೀಡಬೇಕಿರುವ ಕಾರಣ ಫ್ರಾನ್ಸ್ 10ರ ಪೈಕಿ ನಾಲ್ಕು ರಫೇಲ್ ಯುದ್ಧವಿಮಾನಗಳನ್ನು ತನ್ನಲ್ಲೇ ಉಳಿಸಿಕೊಂಡಿದ್ದು, ತಡವಾಗಿ ವಿತರಿಸಲಿದೆ ಎಂದು ಹೇಳಿವೆ.
36 ರಫೇಲ್ ಯುದ್ಧವಿಮಾನಗಳನ್ನು 59 ಸಾವಿರ ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಭಾರತ 2016ರ ಸೆಪ್ಟೆಂಬರ್ನಲ್ಲಿ ಫ್ರಾನ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ವಾಯುಪಡೆಯ ಹೋರಾಟದ ಸಾಮರ್ಥ್ಯ ಕ್ಷೀಣಿಸುತ್ತಿದ್ದ ಹಿನ್ನೆಲೆಯಲ್ಲಿ ಅದಕ್ಕೆ ಹೆಚ್ಚಿನ ಬಲತುಂಬಿ ರೆಕ್ಕೆಪುಕ್ಕ ನೀಡುವುದು ಈ ಒಪ್ಪಂದದ ಉದ್ದೇಶವಾಗಿತ್ತು.