ಇಂಗ್ಲೆಂಡ್​ನಲ್ಲಿ ಪೂರ್ಣಗೊಳ್ಳಲಿದೆ ಐಪಿಎಲ್​ 14ನೇ ಆವೃತ್ತಿ?

ipl england web
Published on

ಲಂಡನ್​: ಐಪಿಎಲ್​ 14ನೇ ಆವೃತ್ತಿಯ ಉಳಿದ 31 ಪಂದ್ಯಗಳ ಆತಿಥ್ಯಕ್ಕೆ ಇಂಗ್ಲೆಂಡ್​ನ 4 ಕೌಂಟಿ ತಂಡಗಳಾದ ಮಿಡ್ಲ್​ಸೆಕ್ಸ್​, ಸರ್ರೆ, ವಾರ್ವಿಕ್​​ಶೈರ್​ ಮತ್ತು ಲಂಕಾಶೈರ್​ ಮುಂದೆ ಬಂದಿವೆ. ಪ್ರತಿಷ್ಠಿತ ಎಂಸಿಸಿ ಕೂಡ ಟೂನಿರ್ಯ ಉಳಿದ ಭಾಗದ ಆಯೋಜನೆಗಾಗಿ ಬಿಸಿಸಿಐಗೆ ಅಹ್ವಾನ ನೀಡಿದೆ ಎನ್ನಲಾಗಿದೆ.

ಭಾರತದ ನಾಲ್ವರು ಕ್ರಿಕೆಟಿಗರಿಗೆ ಕರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಐಪಿಎಲ್​ ಟೂನಿರ್ 29 ಪಂದ್ಯಗಳಿಗೆ ಸ್ಥಗಿತಗೊಂಡಿದ್ದು, ಸೆಪ್ಟೆಂಬರ್​ 14ರಂದು ಭಾರತ ತಂಡದ ಇಂಗ್ಲೆಂಡ್​ ಪ್ರವಾಸ ಮುಕ್ತಾಯಗೊಂಡ ಬೆನ್ನಲ್ಲೇ ಟೂರ್ನಿ ಪೂರ್ಣಗೊಳಿಸುವತ್ತ ಬಿಸಿಸಿಐ ಸದ್ಯ ಗಮನಹರಿಸಿದೆ. ಹೆಚ್ಚಿನ ದಿನಗಳಲ್ಲಿ 2 ಪಂದ್ಯಗಳನ್ನು ಆಯೋಜಿಸುವ ಮೂಲಕ ಸುಮಾರು 20 ದಿನಗಳಲ್ಲೇ ಟೂನಿರ್ಯನ್ನು ಮುಕ್ತಾಯಗೊಳಿಸಲು ಬಿಸಿಸಿಐ ಯೋಜಿಸಿದೆ.

ಲಂಡನ್​ನ ಲಾರ್ಡ್ಸ್​, ಓವಲ್​, ರ್ಬಮಿಂಗ್​ಹ್ಯಾಂನ ಎಜ್​ಬಾಸ್ಟನ್​ ಮತ್ತು ಮ್ಯಾಂಚೆಸ್ಟರ್​ನ ಓಲ್ಡ್​ ಟ್ರಾಫೋರ್ಡ್​ ಮೈದಾನಗಳಲ್ಲಿ ಐಪಿಎಲ್​ ಟೂರ್ನಿಯ ಉಳಿದ ಪಂದ್ಯಗಳನ್ನು ಆಯೋಜಿಸುವ ಆಫರ್​ ನೀಡಲಾಗಿದೆ. ಸದ್ಯದಲ್ಲಿಯೇ ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಯಲಿದ್ದು, ಈ ವೇಳೆ ಬಿಸಿಸಿಐ ಮತ್ತು ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿಯ (ಇಸಿಬಿ) ಅಧಿಕಾರಿಗಳ ನಡುವೆ ಈ ಸಂಬಂಧ ಚರ್ಚೆ ನಡೆಯುವ ಸಾಧ್ಯತೆ ಇದೆ. ಇಂಗ್ಲೆಂಡ್​ನಲ್ಲಿ ಐಪಿಎಲ್​ ಪಂದ್ಯಗಳು ನಡೆದರೆ, ಕ್ರೀಡಾಂಗಣಕ್ಕೆ ಪ್ರೇಕರಿಗೂ ಪ್ರವೇಶ ದೊರೆಯುವ ನಿರೀಕ್ಷೆ ಇದೆ.

ಸದ್ಯದ ಮಟ್ಟಿಗೆ ಟಿ20 ವಿಶ್ವಕಪ್​ ಭಾರತದಲ್ಲಿ ನಡೆಯುವ ಸಾಧ್ಯತೆ ಕ್ಷೀಣವಾಗಿದ್ದು, ಐಪಿಎಲ್​, ಟಿ20 ವಿಶ್ವಕಪ್​ ಎರಡನ್ನೂ ಅಲ್ಪ ಅಂತರದಲ್ಲಿ ಯುಎಇಯಲ್ಲೇ ಆಯೋಜಿಸುವುದು ಕಷ್ಟಕರ. ಇದರಿಂದ ಟಿ20 ವಿಶ್ವಕಪ್​ ವೇಳೆಗೆ ಪಿಚ್​ಗಳು ನಿಧಾನಗತಿಗೆ ತಿರುಗಬಹುದು. ಹೀಗಾಗಿ ಐಪಿಎಲ್​ ಟೂರ್ನಿಯನ್ನು ಇಂಗ್ಲೆಂಡ್​ನಲ್ಲಿ ಆಯೋಜಿಸುವ ಚಿಂತನೆಗೆ ಹೆಚ್ಚಿನ ಬೆಂಬಲ ಲಭಿಸಿದೆ. ಆದರೆ ಇಂಗ್ಲೆಂಡ್​ನಲ್ಲಿ ಐಪಿಎಲ್​ ಆಯೋಜನೆಗೆ ಇತರ ಕೆಲ ಸವಾಲುಗಳೂ ಇವೆ. ಮುಖ್ಯವಾಗಿ ಭಾರತ-ಇಂಗ್ಲೆಂಡ್​ ದೇಶಗಳ ಸಮಯದ ಹೊಂದಾಣಿಕೆ ಕಷ್ಟ. ಇನ್ನು ಇಂಗ್ಲೆಂಡ್​ ಪ್ರವಾಸದ ವೇಳೆ ಭಾರತದ ಸುಮಾರು 30 ಕ್ರಿಕೆಟಿಗರಷ್ಟೇ ಅಲ್ಲಿರಲಿದ್ದಾರೆ. ಉಳಿದ ಕ್ರಿಕೆಟಿಗರನ್ನು ಇಂಗ್ಲೆಂಡ್​ನಲ್ಲಿ ಕ್ವಾರಂಟೈನ್​ಗೆ ಒಳಪಡಿಸುವ ಯೋಜನೆ ಇನ್ನಷ್ಟೇ ಸಿದ್ಧಗೊಳ್ಳಬೇಕಾಗಿದೆ.

ಭಾರತ ವಿರುದ್ಧದ ಟೆಸ್ಟ್​ ಸರಣಿಯ ಬೆನ್ನಲ್ಲೇ ಇಂಗ್ಲೆಂಡ್​ ತಂಡ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧ ಸೀಮಿತ ಓವರ್​ಗಳ ಸರಣಿ ಆಡಬೇಕಾಗಿದೆ. ಅಕ್ಟೋಬರ್​ 14ರವರೆಗೂ ಈ ಪಂದ್ಯಗಳು ನಿಗದಿಯಾಗಿವೆ. ಇತರ ಕೆಲ ದೇಶಗಳೂ ಇದೇ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್​ ಸರಣಿಗಳನ್ನು ಹೊಂದಿವೆ. ಅಲ್ಲದೆ ಇಂಗ್ಲೆಂಡ್​ನ ಕ್ವಾರಂಟೈನ್​ ನಿರ್ಬಂಧಗಳಿಂದಾಗಿ ಹೆಚ್ಚಿನ ಸಮಯ ಹಿಡಿಯುತ್ತದೆ. ಹೀಗಾಗಿ ಇಂಗ್ಲೆಂಡ್​ನಲ್ಲಿ ಐಪಿಎಲ್​ ಟೂರ್ನಿ ಆಯೋಜನೆಗೆ ಬಿಸಿಸಿಐಗೆ ಇತರ ದೇಶಗಳ ಸಹಕಾರವೂ ಅತ್ಯಗತ್ಯವಾಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net