ಮಕ್ಕಳಲ್ಲಿ ಕನಸು ಬಿತ್ತುವ ಕೆಲಸ : ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಆಶಯ

New Project (14)
Published on

ವಿಜಯವಾಣಿ ಸುದ್ದಿಜಾಲ ಕಡಬ

ವ್ಯಕ್ತಿಯ ವ್ಯಕ್ತಿತ್ವವನ್ನು ಮೇರುಸ್ಥಿತಿಗೆ ಒಯ್ಯುವ ಶಿಕ್ಷಣ ನಮ್ಮ ಜೀವನದ ಅತೀ ಪ್ರಾಮುಖ್ಯವಾದ ಅಂಶ. ಐಎಎಸ್, ಐಪಿಎಸ್ ಹುದ್ದೆಗಳನ್ನು ಪಡೆಯಬೇಕಾದರೆ ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅಗತ್ಯತೆ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಮಕ್ಕಳಲ್ಲಿ ಕನಸು ಬಿತ್ತುವ ಕೆಲಸದ ಜತೆಗೆ ಮೌಲ್ಯಗಳನ್ನು ತುಂಬುವ ಚಿಂತನೆ ಹೆಚ್ಚಾಗಬೇಕು ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಅಭಿಪ್ರಾಯಪಟ್ಟರು.

ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾಚೇತನ ಸಭಾಂಗಣದಲ್ಲಿ ಗುರುವಾರ 14ನೇ ವರ್ಷದ ಸ್ಥಾಪಕರ ದಿನಾಚರಣೆ ಶೀಂಟೂರು ಸ್ಮತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ಯೋಧ ಕರ್ನಲ್ ರಾಜೇಶ್ ಹೊಳ್ಳ ಎಸ್.ಎಂ.ಶೀಂಟೂರು ಸನ್ಮಾನ ಸ್ವೀಕರಿಸಿದರು. ಜಿ.ಎಲ್.ಆಚಾರ್ಯ ಜುವೆಲ್ಲರಿ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಸನ್ಮಾನಿಸಿದರು.

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಷ್ಟಪಟ್ಟಾಗ ಮಾತ್ರ ಶಿಕ್ಷಣ ಸಂಸ್ಥೆ ಯಶಸ್ಸು ಪಡೆಯಲು ಸಾಧ್ಯ. ಕಷ್ಟವನ್ನು ಸಂಭ್ರಮಿಸುವ ಮನೋಭಾವ ಬೆಳೆಯಬೇಕು ಎಂದರು.

ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಸೂಂತೋಡು ಹೂವಯ್ಯ ಶೀಂಟೂರು ಸಂಸ್ಮರಣೆ ಮಾಡಿದರು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಶೀಂಟೂರು ಶಿಷ್ಯವೇತನ ವಿತರಿಸಿದರು. ಸವಣೂರು ಸೀತಾರಾಮ ರೈ ಪತ್ನಿ ಕಸ್ತೂರಿ ಎಸ್. ರೈ, ಮಮತಾ ರೈ ಡಿಂಬ್ರಿ, ರಶ್ಮಿ ಅಶ್ವಿನ್ ಶೆಟ್ಟಿ ಉಪಸ್ಥಿತರಿದ್ದರು. ಎನ್.ಜಯಪ್ರಕಾಶ್ ರೈ ವಂದಿಸಿದರು. ವಿದ್ಯಾರ್ಥಿ ಶಂತನುಕೃಷ್ಣ ಸಂವಿಧಾನ ಪೀಠಿಕೆ ವಾಚಿಸಿದರು. ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ರಾಜಲಕ್ಷ್ಮೀ ಎಸ್.ರೈ, ವಿದ್ಯಾರಶ್ಮಿ ವಿದ್ಯಾಲಯ ಪ್ರಾಂಶುಪಾಲೆ ಶಶಿಕಲಾ ಎಸ್.ಆಳ್ವ, ಉಪನ್ಯಾಸಕಿ ಸುಮಾ ಎಸ್., ಶಿಕ್ಷಕಿಯರಾದ ಚೇತನಾ, ಲಿಖಿತಾ ಎಂ.ಎನ್. ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ಪ್ರತಿಭಾ ಎಸ್. ಕಾರ್ಯಕ್ರಮ ನಿರೂಪಿಸಿದರು.

ಬದುಕಿನಲ್ಲಿ ವಿದ್ಯೆ ಅತೀ ಮುಖ್ಯ. ಅಮೆರಿಕಾದಲ್ಲಿ ಶಾಲೆಗೆ ಮಕ್ಕಳನ್ನು ಕಳುಹಿಸದಿದ್ದರೆ ಅವರ ತಂದೆ-ತಾಯಿಗಳಿಗೆ ಶಿಕ್ಷೆ ನೀಡುತ್ತಾರೆ. ಅಂತಹ ಕಾನೂನು ಭಾರತದಲ್ಲಿಯೂ ಬರಬೇಕು. ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಸಮಾಜದ ಉನ್ನತಿಯಾಗಬೇಕಾದರೆ ಪೋಷಕರು ಮಿಲಿಟರಿಯೂ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ತಮ್ಮ ಮಕ್ಕಳನ್ನು ಕಳುಹಿಸುವ ವ್ಯವಸ್ಥೆ ಅನುಷ್ಠಾನವಾಗಬೇಕು. ರಾಜೇಶ್ ಹೊಳ್ಳ ಎಸ್.ಎಂ. ನಿವೃತ್ತ ಯೋಧ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net