Success Story: 300 ರೂ.ನೊಂದಿಗೆ ಅನಾಥವಾಗಿ ರಸ್ತೆಗೆ ಬಿದ್ದ ಮಗು.. ಈಗ ನೂರಾರು ಕೋಟಿಯ ಒಡತಿ!

chinukala
Published on

ಮುಂಬೈ: ಜೀವನದ ನಿಜವಾದ ಅರ್ಥವನ್ನು ಕಲಿಸುವುದು ಕಷ್ಟಗಳು. ಆದರೆ ಅನೇಕರು ತೊಂದರೆಗಳಿಂದ ಹೊರಬರಲಾಗದೆ ನಲುಗಿಹೋಗುತ್ತಾರೆ. ಕೆಲವರು ಕಷ್ಟಗಳು ಹೆಚ್ಚಾದಂತೆ ಅವುಗಳನ್ನು ಮೆಟ್ಟಿ ನಿಂತು ಉನ್ನತ ಸ್ಥಾನಕ್ಕೇರಬೇಕೆಂಬ ಛಲ ರೂಢಿಸಿಕೊಂಡು ಮೇಲೆ ಬರುತ್ತಾರೆ. ಅಂತಹವರಲ್ಲಿ ಕೇವಲ 300 ರೂಪಾಯಿಗಾಗಿ ರಸ್ತೆಗೆ ಬಿದ್ದ ಹುಡುಗಿ ಇಂದು ನೂರಾರು ಕೋಟಿಯ ಮುಖ್ಯಸ್ಥೆಯಾಗಿದ್ದಾಳೆ. ಈಗ ಆಕೆಯ ಯಶೋಗಾಥೆಯ ಬಗ್ಗೆ ತಿಳಿಯೋಣ..

ಮುಂಬೈನ ಚಿನೂಕಾಲಾ 14 ನೇ ವಯಸ್ಸಿನಲ್ಲಿ ಕಡುಕಷ್ಟಗಳನ್ನು ಎದುರಿಸಿದಳು. ಆದರೀಗ 30 ನೇ ವಯಸ್ಸಿನಲ್ಲಿ ಬಹಳಷ್ಟು ಯಶಸ್ಸನ್ನು ಕಂಡು ನೂರಾರು ಕೋಟಿ ಆಸ್ತಿಯ ಒಡತಿಯಾಗಿ ಗಮನಸೆಳೆದಿದ್ದಾರೆ.

ಚಿನೂಕಾಲಾ 14 ವರ್ಷದವಳಿದ್ದಾಗ ಆಕೆಯ ತಾಯಿ ಮನೆ ಬಿಟ್ಟು ಹೊರಟು ಹೋದಳು. ಮುಂದೆ ಅಪ್ಪನ ಜತೆಗೆ ವಾಸವಿದ್ದಳು. ಆದರೆ ಕೆಲವು ದಿನಗಳ ಬಳಿಕ ತಂದೆ ಸಹ ಬೇರೊಬ್ಬ ಮಹಿಳೆಯ ಜೊತೆ ಮದುವೆಯಾಗಿಬಿಟ್ಟ. ಆಗ ಚಿನೂಗೆ ನರಕ ಎಂದರೇನು ಎಂಬ ಅನುಭವವಾಯಿತಂತೆ. ಇದನ್ನು ಆಕೆಯೇ ಹೇಳಿಕೊಂಡಿದ್ದಾಳೆ.

ಕೊನೆಗೆ ಮಲತಾಯಿ ಮತ್ತು ಸ್ವಂತ ತಂದೆ ಮಧ್ಯರಾತ್ರಿ ಹೊರಗೆ ತಳ್ಳಿ ಬಾಗಿಲು ಮುಚ್ಚಿದರು. ಆಗ ಚಿನೂಗೆ 14 ವರ್ಷ. ಆಕೆ ತನ್ನ ದುರಾದೃಷ್ಟವನ್ನು ದೂಷಿಸಿಕೊಳ್ಳುತ್ತ ಭಾರವಾದ ಹೆಜ್ಜೆ ಹಾಕಿದಳು. ಆಗ ಆಕೆಯಲ್ಲಿ ಭಯಕ್ಕಿಂತ ಹೆಚ್ಚಾಗಿ ಅಜ್ಞಾತ ಭಾವ ಬೆಳೆಯಿತು. ಆದರೆ ಆಕೆ ದೃಢ ಮನಸ್ಸು ಮಾಡಿ ಬದುಕು ಕಟ್ಟಿಕೊಳ್ಳಬೇಕೆಂಬ ಛಲಹೊತ್ತು ಮುಂದೆ ಸಾಗಿದಳು. ಕೈಯ್ಯಲ್ಲಿ ಕೇವಲ 300 ರೂ. ಮಾತ್ರ ಇತ್ತು. ಹಲವು ದಿನ ಮುಂಬೈನ ಬೀದಿಗಳು ಮತ್ತು ರೈಲು ನಿಲ್ದಾಣಗಳಲ್ಲಿ ಕಳೆದಳು. ಬಳಿಕ ಒಬ್ಬ ಮಹಿಳೆಯ ಪರಿಚಯವಾಗಿ ಆಕೆ ಸಲಹೆಯಂತೆ

ಮನೆ ಮನೆಗೆ ತೆರಳಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಕೆಲಸಕ್ಕೆ ಸೇರಿಕೊಂಡಳು.

ಮೂರು ವರ್ಷದ ನಂತರ ಸೂರತ್‌ನಲ್ಲಿ ಕೆಲಸ ಮಾಡುವ ಪ್ರಮೇಯ ಒದಗಿಬಂದಿತು. ಸೂರತ್‌ನಲ್ಲಿ ಕೆಲಸ ಮಾಡುವ ದಿನಗಳಲ್ಲಿ ಆಕೆ ಅಮಿತ್ ಎಂಬ ವ್ಯಕ್ತಿಯನ್ನು ವಿವಾಹವಾದರು. ಬಳಿಕ ಆಕೆ ಹಲವು ಕೆಲಸಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಹೇಗೆ ಮೇಲೆ ಬರಬೇಕೆಂಬ ಪಾಠ ಕಲಿತರು. ಚಿನೂ 2007 ರಲ್ಲಿ ಮಿಸೆಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದರು. ಟಾಪ್ 10 ರಲ್ಲಿ ಸ್ಥಾನ ಪಡೆದರು. ನಂತರ ಅವರು ಫ್ಯಾಷನ್ ವಿನ್ಯಾಸದ ಬಗ್ಗೆ ಕಲಿತರು.

ಬಳಿಕ ಬೆಂಗಳೂರಿನ ಮಾಲ್ ಒಂದರಲ್ಲಿ ಚಿಕ್ಕ ಜಾಗವನ್ನು ಬಾಡಿಗೆಗೆ ಪಡೆದು 'ರೂಬನ್ಸ್' ಜ್ಯುವೆಲ್ಲರಿ ಆರಂಭಿಸಿದರು. ಬಳಿಕ ರೂಬೆನ್ಸ್, ಪ್ರವರ್ಧಮಾನಕ್ಕೆ ಬಂದಿತು. 2017ರ ನಂತರ ಆನ್‌ಲೈನ್ ಮಾರುಕಟ್ಟೆಯಲ್ಲೂ 'ರೂಬೆನ್ಸ್' ಮಿಂಚಲಾರಂಭಿಸಿತು. ಈಗ ಅವರು ಪ್ರತಿದಿನ 2,500 ಆರ್ಡರ್‌ಗಳನ್ನು ಸ್ವೀಕರಿಸುತ್ತಾರೆ. ತಮ್ಮ ಉತ್ಪನ್ನಗಳ ಬೆಲೆ 500 ರೂ.ನಿಂದ 10ಸಾವಿರ ರೂ.ವರೆಗೆ ಇರುತ್ತದೆ ಎಂದು ಚೀನು ಹೇಳಿದರು.

ಸದ್ಯ ಅವರ ಸಂಸ್ಥೆಯ ಚಾರ್ಷಿಕ ವಹಿವಾಟು 100 ಕೋಟಿ ರೂ. ಮೇಲಿದೆ. ಕತ್ತಲೆಯಲ್ಲಿಯೂ ಬೆಳಕಿನೆಡೆಗೆ ಸಾಗಿದ ಚಿನೂಕಾಲಾ ಹಲವರಿಗೆ ಆದರ್ಶಪ್ರಾಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net