

ಬೆಂಗಳೂರು: ಶೋಷಿತರು, ದಲಿತರು, ಅಸ್ಪೃಶ್ಯರು, ತುಳಿತಕ್ಕೊಳಗಾದ ಕೆಳಜಾತಿಯ ಜನರಿಗೆ ಮೀಸಲಾತಿ ನ್ಯಾಯದಾನದ ಒಂದು ಭಾಗವೇ ಹೊರತು ಮೀಸಲಾತಿಯೇ ಎಲ್ಲ ಸಮಸ್ಯೆಗೆ ಪರಿಹಾರವಲ್ಲ ಎಂದು ದಲಿತ ಚಿಂತಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ವಿಶ್ಲೇಷಿಸಿದ್ದಾರೆ. ಗಾಂಧಿಭವನದಲ್ಲಿ ಮಾದಿಗ ಪೊಲಿಟಿಕಲ್ ಫೋರಂ ಮತ್ತು ಶೂದ್ರ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ಐತಿಹಾಸಿಕವಾದ ಒಳಮೀಸಲಾತಿ ತೀರ್ಪು ಒಂದು ಮುನ್ನೋಟ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ವತಂತ್ರ ಬಂದು 75 ವರ್ಷಗಳೇ ಕಳೆದು ಹೋಗಿದ್ದರೂ ದಲಿತರಿಗೆ ಸಿಗಬೇಕಾದ ಸಾಮಾಜಿಕ ಸ್ಥಾನಮಾನ, ಉದ್ಯೋಗದಲ್ಲಿ ಮೀಸಲಾತಿ, ಸಮಾನ ಅವಕಾಶಗಳು ದೊರೆತಿಲ್ಲ. ಕಳೆದ 30 ವರ್ಷಗಳ ಹಿಂದೆ ಕರ್ನಾಟಕದಲ್ಲಿ ಆರಂಭವಾದ ಒಳಮೀಸಲಾತಿ ಹೋರಾಟ ಸದ್ಯ ತಾರ್ಕಿಕ ಅಂತ್ಯವನ್ನು ಕಾಣುತ್ತಿದೆ. ದೇಶದ ಸರ್ವೋಚ್ಛ ನ್ಯಾಯಾಲಯದ 7 ಸದಸ್ಯರ ಪೀಠವು ಒಳಮೀಸಲಾತಿಯ ಬಗ್ಗೆ ತೀರ್ಪು ಪ್ರಕಟಿಸಿದ್ದು, ಆಯಾಯ ರಾಜ್ಯಗಳು ಒಳಮೀಸಲಾತಿಯನ್ನು ಜಾರಿಗೊಳಿಸಬಹುದೆಂದು ಹೇಳಿದೆ. ಇದರಿಂದ ನಮ್ಮ ಸುದೀರ್ಘ ಹೋರಾಟಕ್ಕೆ ನ್ಯಾಯ ಸಿಕ್ಕಂತಾಗಿದೆ. ಆದರೆ ಸುಪ್ರೀಂ ಕೋರ್ಟಿನ ತೀರ್ಪಿನ ಬಗ್ಗೆ ನಮ್ಮ ಜನಾಂಗದವರೇ ಕೆಲ ರಾಜ್ಯಗಳಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದು, ಇದನ್ನು ಜಾರಿಗೊಳಿಸುವವರೆಗೆ ಹೋರಾಟವನ್ನು ನಿರಂತರಗೊಳಿಸಬೇಕಾದ ಅವಶ್ಯಕತೆ ಇದೆ.ವಿಶೇಷವಾಗಿ ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕರು ಹೋರಾಟಕ ಮುಂದಾಳತ್ವ ವಹಿಸಬೇಕು ಎಂದು ಹನುಮಂತಯ್ಯ ಕರೆ ನೀಡಿದರು.
ಸಮಾರಂಭದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ, ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ಧರ್ಮಸೇನಾ, ವೀರಭದ್ರಪ್ಪ ಹಾಲರವಿ, ನಿವೃತ್ತ ಐಎಎಸ್ ಅಧಿಕಾರಿಗಳಾದ ಗೋನಾಳ್ ಭೀಮಪ್ಪ, ವಿಜಯಕುಮಾರ ಸಿಂಹ, ಆಯೋಜಕ ಲಕ್ಷ್ಮಿನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಒಳಮೀಸಲಾತಿ ಬಗ್ಗೆ ಜನಾಂಗದ ಬಹುತೇಕ ಜನರಿಗೆ ಮಾಹಿತಿ ಇಲ್ಲ. ಒಳಮೀಸಲಾತಿ ಜಾರಿಯಾಗುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಸಮುದಾಯದ ಜನರಿಗೆ, ವಿದ್ಯಾರ್ಥಿಗಳಿಗೆ, ಯುವಕರಿಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಸಮಾಜದ ಎಲ್ಲರ ಶ್ರಮದಿಂದ ನ್ಯಾಯಾಲಯದಲ್ಲಿ ನಮ್ಮ ಪರವಾದ ತೀರ್ಪು ಬಂದಿದೆ. ಈ ಹಂತದಲ್ಲಿ ತೀರ್ಪಿನ ಬಗ್ಗೆ ಅಪಸ್ವರ ಸಲ್ಲದು ಎಂದು ಹೇಳಿದರು.
-ಆರ್.ಬಿ.ತಿಮ್ಮಾಪುರ, ಅಬಕಾರಿ ಸಚಿವ