

ಶಿಮ್ಲಾ: ಸಿಬಿಐ ಮಾಜಿ ನಿರ್ದೇಶಕ ಅಶ್ವನಿ ಕುಮಾರ್ ಮೃತದೇಹ ಹಿಮಾಚಲ ಪ್ರದೇಶದ ಶಿಮ್ಲಾದ ಅವರ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಶಿಮ್ಲಾ ಎಸ್ಪಿ ಮೋಹಿತ್ ಚಾವ್ಲಾ ಮಾಹಿತಿ ನೀಡಿದ್ದಾರೆ. ವೈದ್ಯರು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಯುತ್ತಿದೆ. ಸಂಬಂಧಪಟ್ಟವರ ವಿಚಾರಣೆಯನ್ನೂ ನಡೆಸಲಾಗುತ್ತಿದೆ ಎಂದು ಮೋಹಿತ್ ತಿಳಿಸಿದ್ದಾರೆ.
1973ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದ ಅಶ್ವನಿ ಕುಮಾರ್ 2008ರಿಂದ 2010ರವರೆಗೆ ಸಿಬಿಐ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಇವರ ಅಧಿಕಾರ ಅವಧಿಯಲ್ಲಿ ಹಲವು ಹೈಪ್ರೊಫೈಲ್ ಪ್ರಕರಣದ ತನಿಖೆಯನ್ನು ನಡೆಸಲಾಗಿತ್ತು.
2014ರಲ್ಲಿ ನಾಗಾಲ್ಯಾಂಡ್ನ ರಾಜ್ಯಪಾಲರಾಗಿಯೂ ನೇಮಕ ಆಗಿದ್ದರು. ಅದಕ್ಕೂ ಮೊದಲು 2013ರಲ್ಲಿ ಅತ್ಯಂತ ಕಡಿಮೆ ಅವಧಿಗೆ ಮಣಿಪುರ ಗವರ್ನರ್ ಆಗಿದ್ದರು. 2008ರಲ್ಲಿ ಸಿಬಿಐ ನಿರ್ದೇಶಕರಾಗಿ ನೇಮಕಗೊಳ್ಳುವ ಮೊದಲು 2006ರಿಂದ 2008ರವರೆಗೆ ಹಿಮಾಚಲ ಪ್ರದೇಶದ ಡಿಜಿಪಿ ಆಗಿ ಕರ್ತವ್ಯ ಮಾಡಿದ್ದರು. (ಏಜೆನ್ಸೀಸ್)