

ಬೆಂಗಳೂರು: ರಾಜಕಾರಣಿಯು ಬರೆದ ಬರವಣಿಗೆಯನ್ನು ವ್ಯಂಗ್ಯವಾಗಿ ನೋಡುವವರೇ ಹೆಚ್ಚು. ರಾಜಕೀಯ, ರಾಜಕಾರಣ ಮತ್ತು ರಾಜಕಾರಣಿಯ ಬಗ್ಗೆ ಮೈಲಿಗೆ ಮನೋಭಾವನೆ ಹೋಗುವವರೆಗೆ ದೇಶ ಅಭಿವೃದ್ಧಿಯಾಗುವುದಿಲ್ಲ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ. ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಸೃಷ್ಟಿ ಪಬ್ಲಿಕೇಶನ್ ಆಯೋಜಿಸಿದ್ದ ಡಾ.ಶುಭದಾ ಎಚ್.ಎನ್ ರಚನೆಯ ‘ದೇವಿ ಕುರುಬತಿ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು. ನಾನು ರಾಜಕಾರಣಿಯಾಗಿದ್ದು ಸಾಹಿತ್ಯ ರಚನೆಯನ್ನು ಮಾಡಿದ್ದೇನೆ. ಶುಭದಾರವರಿಂದ ಪ್ರೇರಣೆ ಪಡೆದು ನನ್ನ ಜೀವನದ ಎಲ್ಲ ಮಜಲುಗಳನ್ನು ಒಳಗೊಂಡ ಆತ್ಮಕಥನವನ್ನು ಮೊದಲು ಬರೆದೆ. ಅದಕ್ಕೆ ಹಳ್ಳಿ ಹಕ್ಕಿಯ ಹಾಡು ಎಂದು ಹೆಸರಿಡಲಾಯಿತು. ಅದು ಎಸ್.ಎಂ.ಕೃಷ್ಣ ಮತ್ತು ಬಿ.ಸರೋಜಾದೇವಿ ಸ್ನೇಹಕ್ಕೆ ಸಂಬಂಧಪಟ್ಟ ಉಲ್ಲೇಖದಿಂದಾಗಿ ದೊಡ್ಡ ವಿವಾದಕ್ಕೆ ಕಾರಣವಾಯಿತು. ಆದರೆ ನಾನು ವಸ್ತುನಿಷ್ಠವಾಗಿ ಸತ್ಯವನ್ನು ಬರೆದಿದ್ದೇನೆ ಎಂಬ ಸಮಾಧಾನವಿದೆ. ಆ ನಂತರ ಈ ವರೆಗೆ ಸಂವಿಧಾನ, ಸ್ವಾತಂತ್ರ್ಯ, ಅಭಿವೃದ್ಧಿ, ಆಡಳಿತಕ್ಕೆ ಸಂಬಂಧಪಟ್ಟ ಒಟ್ಟು 9 ಕೃತಿಗಳನ್ನು ಬರೆದಿದ್ದೇನೆ. ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲ ಕ್ಷೇತ್ರಗಳ ಗೋಷ್ಠಿ ನಡೆಯುತ್ತವೆ. ಆದರೆ ರಾಜಕೀಯ ಕ್ಷೇತ್ರದ ಗೋಷ್ಠಿ ನಡೆಯುತ್ತಿಲ್ಲ. ಸಾಹಿತ್ಯ ಪರಿಷತ್ತಿನವರು ಈ ಬಗ್ಗೆ ಗಮನ ಹರಿಸಬೇಕು. ಮನುಕುಲದ ಉಗಮವಾಗಿದ್ದೇ ಪಶುಸಂಗೋಪನೆಯೊಂದಿಗೆ. ಪ್ರಾಚೀನ ಕಾಲದಲ್ಲಿ ಮನುಷ್ಯನ ನಿಜವಾದ ಆಸ್ತಿ ಪಶುಗಳಾಗಿದ್ದವು. ಆ ಹಿನ್ನೆಲೆಯಲ್ಲಿ ಜಗತ್ತಿನ ಬೆಳವಣಿಗೆಗೆ ಕುರಿಗಳನ್ನು ಸಾಕುವ ಕುರುಬರು ಹಾಗೂ ಗೋವುಗಳನ್ನು ಕಾಯುತ್ತಿದ್ದ ಗೋಪಾಲಕರ ಕೊಡುಗೆ ಅಪಾರ. ಅಂತಹ ಕುರುಬ ರಾಣಿಯೋರ್ವಳು ಎರಡೂವರೆ ಸಾವಿರ ವರ್ಷದ ಹಿಂದೆ ಈಜಿಪ್ಟ್‌ನಲ್ಲಿ ಆಡಳಿತ ಮಾಡಿದ್ದನ್ನು ‘ದೇವಿ ಕುರುಬತಿ’ ಕೃತಿ ಒಳಗೊಂಡಿದೆ ಎಂದು ವಿಶ್ವನಾಥ್ ವಿವರಿಸಿದರು. ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ವಸುಧೇಂದ್ರ, ಸಂತೋಷ ಮೆಹಂದಾಳೆ, ಅನುವಾದ ಸಾಹಿತಿ ನಲ್ಲತಂಬಿ, ಲೇಖಕಿ ಡಾ.ಶುಭದಾ, ಪ್ರಕಾಶಕ ಸೃಷ್ಟಿ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.
ಕತೆ, ಕಾದಂಬರಿಗಳಿಗೆ ಶಾಸಗ್ರಂಥಗಳ ಆಧಾರವಿಲ್ಲ. ಆದರೆ ಎದೆಯ ಧನಿ ಹೇಳುವ ಸತ್ಯವೇ ಕತೆ-ಕಾದಂಬರಿ. ಎಲ್ಲೂ ಸಿಗದ ಸತ್ಯ, ನೈತಿಕ ಮೌಲ್ಯ ಎದೆಯಲ್ಲಿ ಅಡಗಿರುತ್ತದೆ ಎಂದು ಸಾಹಿತಿ ವಸುಧೇಂದ್ರ ಹೇಳಿದರು. ಇತಿಹಾಸ ತಿಳಿಯದವರು ಭವಿಷ್ಯ ಕಟ್ಟಿಕೊಳ್ಳಲಾರರು ಎಂಬ ಅಂಬೇಡ್ಕರ್ ಮಾತು ಎಲ್ಲರೂ ಒಪ್ಪತಕ್ಕದ್ದು. ಇತಿಹಾಸವೆಂದರೆ ಕೇವಲ ಗೆಲುವು, ವಿಜಯ, ವೈಭವೀಕರಣವಲ್ಲ. ಸೋಲು, ಸಾವು, ಸತ್ಯವನ್ನೊಳಗೊಂಡ ನೈಜತೆ. ಈಜಿಪ್ಟಿನ ಇತಿಹಾಸವನ್ನು ‘ದೇವಿ ಕುರುಬತಿ’ಯ ಮೂಲಕ ಲೇಖಕಿ ಕನ್ನಡ ಜಾಯಮಾನಕ್ಕೆ ಒಗ್ಗುವಂತೆ ರಚಿಸಿದ್ದಾರೆ.