

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಸೇರಿ ಇನ್ನಿತರೆ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ವಿಭಿನ್ನ ಐಡಿಯಾ ನಿಮ್ಮಲ್ಲಿದ್ದರೆ ಇಲ್ಲಿದೆ ಸುವರ್ಣಾವಕಾಶ. ಅನ್‌ಬಾಕ್ಸಿಂಗ್ ಬೆಂಗಳೂರು ಹಾಗೂ ಡಬ್ಲೂೃಟಿ ಫಂಡ್ ಸಹಯೋಗದೊಂದಿಗೆ ಬೆಂಗಳೂರು ಸಮಸ್ಯೆಗೆ ಪರಿಹಾರ ಸೂಚಿಸುವ ಐದು ವಿಭಿನ್ನ ಆಲೋಚನೆಗಳಿಗೆ ತಲಾ 10 ಲಕ್ಷ ರೂ. ಅನುದಾನ ನೀಡುವ ‘ನಮ್ಮ ಬೆಂಗಳೂರು ಚಾಲೆಂಜ್’ ಎಂಬ ಹೆಸರಿನಲ್ಲಿ ಪರಿಹಾರಗಳನ್ನು ಆಹ್ವಾನಿಸಿದೆ. ಉತ್ತಮ ಐಡಿಯಾ ನೀಡುವ 5 ವ್ಯಕ್ತಿಗಳು ಅಥವಾ ಸಂಸ್ಥೆಗಳು ತಲಾ 10 ಲಕ್ಷ ರೂ. ಅನುದಾನ ತಮ್ಮದಾಗಿಸಿಕೊಳ್ಳಬಹುದು. ಈ ಕುರಿತು ಮಾತನಾಡಿದ ಅನ್‌ಬಾಕ್ಸಿಂಗ್ ಬೆಂಗಳೂರಿನ ಸಿಇಒ ಮಾಲಿನಿ ಗೋಯಲ್, ಈ ವಿಶಿಷ್ಟ ಸ್ಪರ್ಧೆಯ ಮೂಲಕ ನಗರದ ದೀರ್ಘಕಾಲೀನ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಡಬ್ಲ್ಯೂಟಿ ಫಂಡ್‌ನ ಉದ್ಯಮಿ ನಿಖಿಲ್ ಕಾಮತ್ ಬೆಂಗಳೂರಿನಿಂದ ಏನೆಲ್ಲವನ್ನೂ ಪಡೆದುಕೊಂಡಿರುವ ನಾವು ಬೆಂಗಳೂರನ್ನು ಸುಂದರವನ್ನಾಗಿ ಉಳಿಸಿಕೊಳ್ಳಲು ಜನತೆ ಆಲೋಚನೆಗಳನ್ನು ಆಹ್ವಾನಿಸಿದ್ದೇವೆ ಎಂದರು.
ನಮ್ಮ ಬೆಂಗಳೂರು ಚಾಲೆಂಜ್‌ಗಾಗಿ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ನಾವೀನ್ಯತೆ, ಪ್ರಭಾವ, ಕಾರ್ಯಸಾಧ್ಯತೆ, ಸ್ಕೇಲೆಬಿಲಿಟಿ ಮತ್ತು ಬದ್ಧತೆಯ ಆಧಾರದ ಮೇಲೆ ಅವರ ಐಡಿಯಾಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಇಚ್ಚಿಸುವವರು ಅನ್‌ಬಾಕ್ಸಿಂಗ್ ಬೆಂಗಳೂರಿನ ಅಧಿಕೃತ ವೆಬ್‌ಸೈಟ್ https://www.unboxingblr.com ನಲ್ಲಿ ಅರ್ಜಿ ಭರ್ತಿ ಮಾಡಿ, ತಮ್ಮ ಸ್ವವಿವರ ಮತ್ತು ಅವರ ಐಡಿಯಾಗಳ ಪರಿಚಯಿಸುವ ಕಿರು ವೀಡಿಯೊವನ್ನು ಸಲ್ಲಿಸಬೇಕು. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ವರ್ಚುವಲ್ ಇಂಟರ್‌ವ್ಯೆಗಳಿಗೆ ಆಹ್ವಾನಿಸಿ ಐವರನ್ನು ಆಯ್ಕೆ ಮಾಡಲಾಗುತ್ತದೆ.