

Kochi: ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಬಂದಿದ್ದ ಕಿನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ(Raila Odinga) ಅವರು ಬುಧವಾರ(ಅ. 150 ಬೆಳಗ್ಗೆ ಕೂತ್ತಟ್ಟುಕುಲಂನಲ್ಲಿ ಬೆಳಗ್ಗೆ ವಾಕಿಂಗ್ ಮಾಡುವಾಗ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಒಡಿಂಗಾ ಆರು ದಿನಗಳ ಹಿಂದೆ ಅವರ ಮಗಳು ಮತ್ತು ಆಪ್ತ ಕುಟುಂಬ ಸದಸ್ಯರೊಂದಿಗೆ ಕೂತಟ್ಟುಕುಲಂಗೆ ಆಗಮಿಸಿದ್ದರೆನ್ನಲಾಗಿದೆ. ಆಸ್ಪತ್ರೆಯಲ್ಲಿ ಬೆಳಿಗ್ಗೆ ನಡಿಗೆ ಮತ್ತು ಚಿಕಿತ್ಸಾ ಅವಧಿಗಳನ್ನು ನಿಯಮಿತವಾಗಿ ಮಾಡುತ್ತಿದ್ದರು.
ಇಂದು ಬೆಳಿಗ್ಗೆ 6.30 ರ ಸುಮಾರಿಗೆ ಅವರು ನಡೆದುಕೊಂಡು ಹೋಗುತ್ತಿದ್ದಾಗ ಹೃದಯಾಘಾತ ಸಂಭವಿಸಿದೆ. ತಕ್ಷಣ ಶ್ರೀಧರೀಯಂ ಆಯುರ್ವೇದ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೂತಟ್ಟುಕುಲಂನ ದೇವ ಮಾತಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ನವದೆಹಲಿಯಲ್ಲಿರುವ ಕಿನ್ಯಾ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹವನ್ನು ಸ್ವದೇಶಕ್ಕೆ ಕಳುಹಿಸಲು ಕೇರಳ ಸರ್ಕಾರ ಮತ್ತು ಆಸ್ಪತ್ರೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ. ಅವರ ನಿಧನಕ್ಕೆ ಸ್ಥಳೀಯ ನಾಯಕರು ಮತ್ತು ಕೀನ್ಯಾದ ವಲಸಿಗರು ಸಂತಾಪ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ.
ರೈಲಾ ಒಡಿಂಗಾ ಯಾರು?
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಿನ್ಯಾ ರಾಜಕೀಯದಲ್ಲಿ ತನ್ನದೇ ವರ್ಚಸ್ಸು ಹೊಂದಿದ್ದ ರೈಲಾ ಒಡಿಂಗಾ, ರಾಷ್ಟ್ರೀಯ ಸಾಮರಸ್ಯ ಮತ್ತು ಸಾಂವಿಧಾನಿಕ ಸುಧಾರಣೆಯ ನಿರ್ಣಾಯಕ ಅವಧಿಯಲ್ಲಿ 2008 ರಿಂದ 2013 ಕಿನ್ಯಾ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.
ತಮ್ಮ ಭಾಷಣಗಳು ಮತ್ತು ಜನರ ಜೊತೆ ಬೆರೆಯುವುದಕ್ಕೆ ಹೆಸರುವಾಸಿಯಾಗಿದ್ದ ಅವರು, ಆಧುನಿಕ ಕಿನ್ಯಾಯ ಪ್ರಜಾಪ್ರಭುತ್ವವನ್ನು ರೂಪಿಸುವವರಲ್ಲಿ ಒಬ್ಬರಾಗಿದ್ದರು. 2007-08ರ ಚುನಾವಣಾ ಬಳಿಕ ನಡೆದ ಹಿಂಸಾಚಾರವನ್ನು ಕೊನೆಗೊಳಿಸಿ ಅಧಿಕಾರ ಹಂಚಿಕೆ ಒಪ್ಪಂದದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಒಡಿಂಗಾ ಅವರು ದೀರ್ಘಕಾಲ ವಿರೋಧ ಪಕ್ಷದ ನಾಯಕರಾಗಿದ್ದರು ಮತ್ತು ಆರೆಂಜ್ ಡೆಮಾಕ್ರಟಿಕ್ ಮೂವ್ಮೆಂಟ್ನ ಮುಖ್ಯಸ್ಥರಾಗಿದ್ದರು. (ಏಜೆನ್ಸೀಸ್)