ಕರೂರು ಕಾಲ್ತುಳಿತ: ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಧ್ವನಿ; ಘಟನೆಗೆ ಟಿವಿಕೆ ಮತ್ತು ವಿಜಯ್ ಅವರೇ ಹೊಣೆ; ಸಿಎಂ ಎಂ ಕೆ ಸ್ಟಾಲಿನ್| M K Stalin

ವಿಜಯವಾಣಿ (47)
Published on

Chennai: ಕರೂರಿನಲ್ಲಿ ಸೆ. 27ರಂದು 41 ಮಂದಿಗೆ ಸಾವಿಗೆ ಕಾರಣವಾದ ಕಾಲ್ತುಳಿತ ಘಟನೆಯೂ ತಮಿಳುನಾಡು ವಿಧಾನಸಭೆಯಲ್ಲಿ ಬುಧವಾರ(ಅ. 15) ಪ್ರತಿಧ್ವನಿಸಿದ್ದು, ಘಟನೆಗೆ ತಮಿಳಿಗ ವೆಟ್ರಿ ಕಳಗಂ ಪಕ್ಷ ಮತ್ತು ಅದರ ಮುಖ್ಯಸ್ಥ ದಳಪತಿ ವಿಜಯ್ ಅವರೇ ಹೊಣೆ ಎಂದು ಸಿಎಂ ಎಂ.ಕೆ.ಸ್ಟಾಲಿನ್ (M K Stalin) ವಿಧಾನಸಭೆಯಲ್ಲಿ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಘಟನೆ ಕುರಿತು ಮಾತನಾಡಿದ ಎಂ.ಕೆ.ಸ್ಟಾಲಿನ್, ಟಿವಿಕೆ ವೇಳಾಪಟ್ಟಿಯಲ್ಲಿನ ದೋಷಗಳೇ ಕಾಲ್ತುಳಿತಕ್ಕೆ ಕಾರಣ ಎಂದು ಆರೋಪಿಸಿದ ಅವರು,  ಮಧ್ಯಾಹ್ನ 3 ಗಂಟೆಯಿಂದ ಐದು ಗಂಟೆಗಳ ಕಾಲ ಕಾರ್ಯಕ್ರಮ ನಡೆಯಲಿದೆ ಎಂದು ಪೊಲೀಸರಿಗೆ ಪಕ್ಷ ತಿಳಿಸಿತ್ತು. ಬಳಿಕ ವಿಜಯ್ ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ತಲುಪುತ್ತಾರೆ ಎಂದು ಪಕ್ಷ ಹೇಳಿದ್ದರಿಂದ ಪೊಲೀಸ್ ನಿಯೋಜನೆಯಲ್ಲಿ ಬದಲಾವಣೆ ಮಾಡಲಾಗಿತ್ತು. ಆದರೆ ಅಂತಿಮವಾಗಿ ಸಂಜೆ 7 ಗಂಟೆಗೆ ವಿಜಯ್ ಸ್ಥಳಕ್ಕೆ ಆಗಮಿಸಿದ್ದಾರೆ. ಇದರಿಂದ ಒಮ್ಮೆಲೆ ಭಾರಿ ಜನಸಂದಣಿಯಾಗಿದ್ದು ಘಟನೆಗೆ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.

ಇದೇ ವೇಳೆ ಟಿವಿಕೆ ಪಕ್ಷದ ಕಾರ್ಯಕ್ರಮದ ನಿರ್ವಹಣೆಯನ್ನು ಟೀಕಿಸಿದ ಅವರು, ಕುಡಿಯುವ ನೀರು ಮತ್ತು ಮಹಿಳೆಯರಿಗೆ ಸಾಕಷ್ಟು ಸ್ನಾನಗೃಹಗಳಂತಹ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಪಕ್ಷ ಮತ್ತು ಅದರ ನಾಯಕರು ವಿಫಲರಾಗಿದ್ದರು. ಜೊತೆಗೆ ಟಿವಿಕೆ ಕಾರ್ಯಕರ್ತರು ಇಬ್ಬರು ಆ್ಯಂಬುಲೆನ್ಸ್​ ಚಾಲಕರ ಮೇಲೆ ಹಲ್ಲೆ ನಡೆಸಿದ್ದಾರೆ. ಆ್ಯಂಬುಲೆನ್ಸ್​ಗಳನ್ನು ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.

ಸ್ಥಳದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿತ್ತು ಎಂಬ ಟಿವಿಕೆ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಸ್ಟಾಲಿನ್,  ಹೆಚ್ಚಿನ ಅನಾಹುತಗಳನ್ನು ತಪ್ಪಿಸಲು ಜನರೇಟರ್ ಅನ್ನು ಆಫ್ ಮಾಡಲಾಗಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net