ನೇಪಾಳದ ಹಂಗಾಮಿ ಸರ್ಕಾರದ ಮುಖ್ಯಸ್ಥೆಯಾಗಿ ಮಾಜಿ ನ್ಯಾಯಮೂರ್ತಿ ಸುಶೀಲಾ ಕರ್ಕಿ ನೇಮಕವಾಗುವ ಸಾಧ್ಯತೆ| Sushila Karki

Susheela Karki
Published on

Sushila Karki: ನೇಪಾಳದಲ್ಲಿ ಸೋಷಿಯಲ್ ಮೀಡಿಯಾ ಬ್ಯಾನ್​ನಿಂದ ಶುರುವಾದ ಹಿಂಸಾಚಾರ, ಭ್ರಷ್ಟಾಚಾರದ ವಿರುದ್ಧದ ಹೋರಾಟವಾಗಿ ರೂಪಗೊಂಡು ಅಲ್ಲಿನ ಸರ್ಕಾರವನ್ನು ಬಲಿ ತೆಗೆದುಕೊಂಡಿದೆ. ಈ ನಡುವೆ ಆಡಳಿತವನ್ನು ಸೇನೆ ವಹಿಸಿಕೊಂಡಿದೆ. ಶೀಘ್ರದಲ್ಲೇ ಮಧ್ಯಂತರ ಸರ್ಕಾರ ರಚನೆಯಾಗಲಿದ್ದು, ಮುಖ್ಯಸ್ಥೆಯಾಗಿ ನೇಪಾಳ ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಸುಶೀಲಾ ಕರ್ಕಿ ನೇಮಕವಾಗುವ ಸಾಧ್ಯತೆ ಇದೆ ಎಂದು ಶುಕ್ರವಾರ(ಸೆ. 12) ವರದಿಯಾಗಿದೆ.

ನೇಪಾಳ ಅಧ್ಯಕ್ಷ ರಾಮಚಂದ್ರ ಪೌಡೆಲ್, ಹಿರಿಯ ರಾಜಕೀಯ ನಾಯಕರು, ಸೇನಾ ಮುಖ್ಯಸ್ಥರು ಮತ್ತು ಇತ್ತೀಚಿನ ಸಾಮೂಹಿಕ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿರುವ ಯುವ ನೇತೃತ್ವದ ಜನರಲ್ ಝಡ್ ಚಳವಳಿಯ ಪ್ರತಿನಿಧಿಗಳ ನಡುವೆ ನಡೆದ ಮಾತುಕತೆಗಳ ಮಧ್ಯೆ ಸುಶೀಲಾ ಕರ್ಕಿ ಹೆಸರು ಪ್ರಸ್ತಾಪ ಆಗಿದೆ ಎನ್ನಲಾಗಿದೆ.

ನೇಪಾಳದ ನ್ಯಾಯಾಂಗದಲ್ಲಿ ಗೌರವಾನ್ವಿತ ವ್ಯಕ್ತಿ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಂದು ಪ್ರಸಿದ್ಧರಾಗಿರುವ ಕರ್ಕಿ ಅವರನ್ನು ಮಧ್ಯಂತರ ಆಡಳಿತದ ಮುಖ್ಯಸ್ಥರನ್ನಾಗಿ ಮಾಡಲು ಯುವಕರ ಗುಂಪು ಬಲವಾಗಿ ಶಿಫಾರಸು ಮಾಡಿದೆ. ರಾಷ್ಟ್ರಪತಿಗಳು, ಸಾಂವಿಧಾನಿಕ ತಜ್ಞರು ಮತ್ತು ಪಕ್ಷಗಳ ನಾಯಕರೊಂದಿಗೆ ಸಮಾಲೋಚನೆ ನಡೆಸಿದ ನಂತರ ಕರ್ಕಿ ಅವರ ನೇಮಕಾತಿ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಹಂಗಾಮಿ ಸರ್ಕಾರದ ಮುಖ್ಯಸ್ಥೆಯಾಗಿ ಸುಶೀಲಾ ಕರ್ಕಿ ನೇಮಕಗೊಂಡರೆ ನೇಪಾಳದ ಮೊದಲ ಮಹಿಳಾ ಪ್ರಧಾನಿಯಾಗುತ್ತಾರೆ.

ಈ ವಾರದ ಆರಂಭದ ಸೋಮವಾರದಿಂದ ಸಾವನ್ನಪ್ಪಿದವರ ಸಂಖ್ಯೆ ಆರೋಗ್ಯ ಸಚಿವಾಲಯ ದೃಢಪಡಿಸಿದೆ. ಹಿಂಸಾಚಾರದಲ್ಲಿ ಒಟ್ಟು ಸಾವಿನ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಭ್ರಷ್ಟಾಚಾರದ ಆರೋಪ, ವಿವಾದಾತ್ಮಕ ಸಾಮಾಜಿಕ ಮಾಧ್ಯಮ ನಿಷೇಧದಿಂದ ಜನರಲ್ ಝೆಡ್ ಪ್ರತಿಭಟನಾಕಾರರ ಹೋರಾಟ ಹಿಂಸಾತ್ಮಕ ರೂಪ ತೆಳೆದು ಈ ಘಟನೆ ನಡೆಯಿತು.

ಗೋಲಿಬಾರ್​ನಲ್ಲಿ ಪ್ರತಿಭಟನಾಕಾರರು ಸಾವನ್ನಪ್ಪಿದ ಹಿನ್ನೆಲೆ ಉದ್ರಿಕ್ತರು ಪ್ರಧಾನಿ ನಿವಾಸ, ರಾಷ್ಟ್ರಪತಿ, ಸಂಸತ್ ಕಚೇರಿಗೆ ಬೆಂಕಿ ಹಚ್ಚಿದರು. ಈ ಹಿನ್ನೆಲೆ ಪ್ರಧಾನಿ ಕೆ.ಪಿ.ಶರ್ಮಾ ಓಲಿ ರಾಜೀನಾಮೆ ನೀಡಿದರು. ಓಲಿ ಅವರ ರಾಜೀನಾಮೆಯನ್ನು ಅಂಗೀಕರಿಸಿದ ಅಧ್ಯಕ್ಷ ಪೌಡೆಲ್, ಹೊಸ ಮಂತ್ರಿ ಮಂಡಳಿ ರಚನೆಯಾಗುವವರೆಗೆ ತಮ್ಮ ಸಂಪುಟವನ್ನು ತಾತ್ಕಾಲಿಕ ಆಧಾರದ ಮೇಲೆ ಮುಂದುವರೆಸಿದ್ದಾರೆ.

ಎರಡು ಸಾಂವಿಧಾನಿಕ ಮಾರ್ಗಗಳನ್ನು ಪರಿಗಣಿಸಲಾಗಿತ್ತು. ಒಂದು ಸಂಸತ್ತನ್ನು ವಿಸರ್ಜಿಸುವುದು ಅಥವಾ ಉಸ್ತುವಾರಿ ವ್ಯವಸ್ಥೆಯಡಿಯಲ್ಲಿ ಅದನ್ನು ಉಳಿಸಿಕೊಳ್ಳುವುದು. ಜನರಲ್ ಝಡ್ ಗುಂಪು ಸೇರಿದಂತೆ ಪಾಲುದಾರರು ಪ್ರಸ್ತುತ ಸಾಂವಿಧಾನಿಕ ಚೌಕಟ್ಟಿನೊಳಗೆ ಪರಿಹಾರವನ್ನು ಅನುಸರಿಸಲು ಒಪ್ಪಿಕೊಂಡಿದ್ದಾರೆ.

ಉದ್ವಿಗ್ನತೆಯನ್ನು ಕಡಿಮೆ ಮಾಡಲು ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ 7 ರಿಂದ 11 ರವರೆಗೆ ರಾಷ್ಟ್ರವ್ಯಾಪಿ ಕರ್ಫ್ಯೂವನ್ನು ಸಡಿಲಿಸಿದರು. ನಿರ್ಬಂಧಿತ ಆದೇಶಗಳು ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಜಾರಿಯಲ್ಲಿರುತ್ತವೆ, ನಂತರ ಸಂಜೆ 7 ರಿಂದ ಬೆಳಿಗ್ಗೆ 6 ರವರೆಗೆ ಕರ್ಫ್ಯೂ ಪುನಃ ಜಾರಿಯಲ್ಲಿರುತ್ತದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net