ಮಾಜಿ ಮುಖ್ಯಮಂತ್ರಿ ಎಸ್​.ಎಂ.ಕೃಷ್ಣ ನಿಧನ: ಡಿ.11ರಂದು ಸರ್ಕಾರಿ ರಜೆ, ರಾಜ್ಯ ಸರ್ಕಾರದಿಂದ ಘೋಷಣೆ | S M Krishna

S M Krishna
Published on

ಬೆಂಗಳೂರು: ರಾಜ್ಯದ ಧೀಮಂತ ನಾಯಕ, ಮುತ್ಸದ್ದಿ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್​.ಎಂ. ಕೃಷ್ಣ ( S M Krishna ) ಅವರು ವಯೋಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸರ್ಕಾರಿ ರಜೆ ಘೋಷಣೆ ಮಾಡಿದೆ.

ರಾಜ್ಯಾದ್ಯಂತ ನಾಳೆ (ಡಿ.11) ಸರ್ಕಾರಿ ರಜೆಯನ್ನು ಸರ್ಕಾರ ಘೋಷಿಸಿದೆ. ಅಲ್ಲದೆ, ರಾಜ್ಯದಲ್ಲಿ 3 ದಿನ ಶೋಕಾಚರಣೆ ಇರಲಿದೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.‌ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಸದಾಶಿವನಗರದ ಎಸ್​.ಎಂ. ಕೃಷ್ಣ ನಿವಾಸದ ಬಳಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಡಿಕೆ ಶಿವಕುಮಾರ್​ ಅವರು ರಜೆ ಘೋಷಣೆ ಮಾಡಿದರು.

ಎಸ್​.ಎಂ. ಕೃಷ್ಣ ಅವರಿಗೆ 92 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ತಡರಾತ್ರಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೃಷ್ಣ ಅವರು ಇತ್ತೀಚಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಸಹ ಪಡೆದುಕೊಂಡಿದ್ದರು. ಚೇತರಿಸಿಕೊಳ್ಳದ ಹಿನ್ನೆಲೆ ಸದಾಶಿವ ನಗರದಲ್ಲಿರುವ ಅವರ ನಿವಾಸದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ 2.30 ರ ಹೊತ್ತಿಗೆ ವಿಧಿವಶರಾದರು ಎಂದು ಕುಟುಂಬದ ಮೂಲಗಳು ಖಚಿತಪಡಿಸಿವೆ.

ಕೃಷ್ಣ ಅವರು 1999 ರಿಂದ 2004 ರವರೆಗೆ ಕರ್ನಾಟಕದ 10ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅಲ್ಲದೆ, ರಾಜಕೀಯ ಜೀವನದಲ್ಲಿ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲರಾಗಿ ಹಾಗೂ ಕೇಂದ್ರ ವಿದೇಶಾಂಗ ಸಚಿವರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ, ಕರ್ನಾಟಕ ವಿಧಾನಸಭಾ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು. 2023ರಲ್ಲಿ ಎಸ್​.ಎಂ. ಕೃಷ್ಣ ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಲಾಯಿತು.

ಸೋಮನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ

ಬೆಂಗಳೂರಿನ ಸದಾಶಿನಗರದ ನಿವಾಸದಲ್ಲಿ ಬುಧವಾರ ಬೆಳಗ್ಗೆ 8 ಗಂಟೆವರೆಗೆ ಎಸ್. ಎಂ. ಕೃಷ್ಣ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಮಂಡ್ಯ ಜಿಲ್ಲೆಯ ಸ್ವಗ್ರಾಮ ಸೋಮನಹಳ್ಳಿಗೆ ಪಾರ್ಥೀವ ಶರೀರದ ರವಾನೆ ಮಾಡಲಾಗುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬುಧವಾರ ಮದ್ಯಾಹ್ನ 3 ಗಂಟೆಯವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net