ಧಾರ್ಮಿಕ ಶಿಕ್ಷಣ ಯೋಜನೆ ಸಮಿತಿ ರಚನೆ

Ism_Religious
Published on

ಪುತ್ತೂರು: ಪುತ್ತೂರು ತಾಲೂಕಿನಲ್ಲಿ ಶಾಲಾ ಮಕ್ಕಳಿಗೆ 3 ಹಂತದಲ್ಲಿ ನೀಡಲು ಉದ್ದೇಶಿಸಿರುವ ಹಿಂದು ಧಾರ್ಮಿಕ ಶಿಕ್ಷಣ ಯೋಜನೆಗೆ ಸಂಬಂಧಿಸಿ ಪ್ರತಿ ಗ್ರಾಮದಲ್ಲಿ ರಚನೆಯಾಗಲಿರುವ ಗ್ರಾಮ ಸಮಿತಿಗೆ ಕೆದಂಬಾಡಿ ಗ್ರಾಮದಲ್ಲಿ ಭಾನುವಾರ ಚಾಲನೆ ನೀಡಲಾಗಿದ್ದು, ತಾಲೂಕಿನ ಪ್ರಥಮ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಗ್ರಾಮ ಸಮಿತಿಗಳ ರಚನೆ ನಡೆಯಲಿದೆ.

ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನಡೆಯುವ ಹಿಂದು ಧಾರ್ಮಿಕ ಶಿಕ್ಷಣಕ್ಕೆ ಶೃಂಗೇರಿ ಮಠದಿಂದಲೇ ಪಠ್ಯ ಪುಸ್ತಕ ಮತ್ತು ಶಿಕ್ಷಕ ತರಬೇತಿ ಕಾರ್ಯ ನಡೆಯಲಿದ್ದು, ಇದನ್ನು ಅನುಷ್ಠಾನಗೊಳಿಸಲು ಪುತ್ತೂರು ತಾಲೂಕು ಮಟ್ಟದ ಮೇಲುಸ್ತುವಾರಿ ಸಮಿತಿ ರಚನೆಯಾಗುತ್ತಿದೆ. ಪ್ರತಿ ಗ್ರಾಮ ಮಟ್ಟದಲ್ಲಿ ಸಮಿತಿ ರಚನೆಗೆ ಚಾಲನೆ ನೀಡಲಾಗಿದೆ.

ಕೆದಂಬಾಡಿ ಗ್ರಾಮದಲ್ಲಿ ತಾಲೂಕಿನ ಮೊದಲ ಗ್ರಾಮ ಸಮಿತಿ ಭಾನುವಾರ ರಚನೆಯಾಗಿದೆ. ತಿಂಗಳಾಡಿಯ ಶ್ರೀ ದೇವತಾ ಭಜನಾ ಮಂದಿರದಲ್ಲಿ ದೇವತಾ ಭಜನಾ ಮಂದಿರದ ಅಧ್ಯಕ್ಷ ಜಯರಾಮ ರೈ ಮಿತ್ರಂಪಾಡಿ ಅಧ್ಯಕ್ಷತೆಯಲ್ಲಿ ನಡೆದ ಧರ್ಮಾಭಿಮಾನಿಗಳ ಸಭೆಯಲ್ಲಿ ಗ್ರಾಮ ಸಮಿತಿ ರಚಿಸಿ ಹಿಂದು ಧಾರ್ಮಿಕ ಶಿಕ್ಷಣ ಗ್ರಾಮದ ಮಕ್ಕಳಿಗೆ ನೀಡಲು ನಿರ್ಧರಿಸಲಾಗಿದೆ.

ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಸುಬ್ರಹ್ಮಣ್ಯ ಪ್ರಸ್ತಾವಿಕವಾಗಿ ಮಾತನಾಡಿದರು.

ಯುಗಾದಿಯಿಂದ ತರಗತಿ ಆರಂಭ

ಈ ವರ್ಷದ ಯುಗಾದಿಯಿಂದಲೇ ತಾಲೂಕಿನ ಎಲ್ಲ ಗ್ರಾಮಗಳ ಶ್ರದ್ಧಾಕೇಂದ್ರವನ್ನು ಕೇಂದ್ರವಾಗಿಟ್ಟುಕೊಂಡು ಏಕಕಾಲದಲ್ಲಿ ಹಿಂದು ಧಾರ್ಮಿಕ ಶಿಕ್ಷಣ ಆರಂಭಿಸಲಾಗುತ್ತದೆ. 1ರಿಂದ 4ನೇ ತರಗತಿ, 5ರಿಂದ 8ನೇ ತರಗತಿ ಮತ್ತು 9ರಿಂದ ದ್ವಿತೀಯ ಪಿಯುಸಿ ಹೀಗೆ 3 ಹಂತದಲ್ಲಿ ಧಾರ್ಮಿಕ ಶಿಕ್ಷಣ ನಡೆಯಲಿದ್ದು, ಇದಕ್ಕಾಗಿ 3 ಹಂತದ ಪಠ್ಯ ಪುಸ್ತಕ ಶೃಂಗೇರಿ ಮಠದಿಂದ ಸಿಗಲಿದೆ. ಗ್ರಾಮಮಟ್ಟದಲ್ಲಿ ನೇಮಕಗೊಳ್ಳುವ ಶಿಕ್ಷಕರಿಗೆ ಶೃಂಗೇರಿಯಿಂದಲೇ ತರಬೇತಿ ನೀಡಲಾಗುತ್ತದೆ. ತಾಲೂಕಿನ ಗ್ರಾಮಗಳಲ್ಲಿ ಗ್ರಾಮ ಸಮಿತಿ ರಚನೆಯಾಗುತ್ತಿದ್ದು, ಜ.26ರಂದು ತಾಲೂಕು ಮೇಲುಸ್ತುವಾರಿ ಸಮಿತಿ ಸಭೆ ಪುತ್ತೂರಿನಲ್ಲಿ ನಡೆಯಲಿದೆ ಎಂದು ಸಂಘಟಕರು ಮಾಹಿತಿ ನೀಡಿದರು.

ಅಧ್ಯಕ್ಷರಾಗಿ ತಾರಾ ಬಳ್ಳಾಲ್ ಆಯ್ಕೆ

ಹಿಂದು ಧಾರ್ಮಿಕ ಶಿಕ್ಷಣ ಯೋಜನೆ ಕೆದಂಬಾಡಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ತಾರಾ ಬಳ್ಳಾಲ್ ಬೀಡು, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ಸುಜಾತಾ ಮುಳಿಗದ್ದೆ, ಸಂಘಟನಾ ಕಾರ್ಯದರ್ಶಿಯಾಗಿ ಪ್ರವೀಣ್ ಶೆಟ್ಟಿ ಮಠ ಮತ್ತು ಸೂರ್ಯಪ್ರಸನ್ನ ರೈ, ಕೋಶಾಧಿಕಾರಿಯಾಗಿ ವರುಣ್, ಸಂಚಾಲಕರಾಗಿ ಸೀತಾರಾಮ ರೈ ಕೆದಂಬಾಡಿಗುತ್ತು, ಸಹಸಂಚಾಲಕರಾಗಿ ಮೋಹನ್ ಶೆಟ್ಟಿ ಮಜಲಮೂಲೆ, ಗಂಗಾಧರ ಮುಳಿಗದ್ದೆ, ಗೌರವಾಧ್ಯಕ್ಷರಾಗಿ ಉಂಡೆಮನೆ ಶ್ರೀಕೃಷ್ಣ ಭಟ್, ಮಿತ್ರಂಪಾಡಿ ಜಯರಾಮ ರೈ, ಸುಭಾಷ್ ರೈ ಕಡಮಜಲು, ರಾಮಯ್ಯ ರೈ ತಿಂಗಳಾಡಿ, ಕೃಷ್ಣ ಕುಮಾರ್ ರೈ ಕೆದಂಬಾಡಿ ಗುತ್ತು, ಗೌರವ ಸಲಹೆಗಾರರಾಗಿ ಮಾದೋಡಿ ಭಾಸ್ಕರ ರೈ ನಂಜೆ, ಭಾಸ್ಕರ ಬಳ್ಳಾಲ್ ಕೆದಂಬಾಡಿ ಬೀಡು, ಜಯಾನಂದ ರೈ ಮಿತ್ರಂಪಾಡಿ, ಉಮೇಶ್ ರೈ ಮಿತ್ತೋಡಿ, ಸದಸ್ಯರಾಗಿ ಸತೀಶ್ ರೈ ಗುತ್ತು, ರಾಧಾಕೃಷ್ಣ ರೈ ಚಾವಡಿ, ಚಂದ್ರಾವತಿ ರೈ ಚಾವಡಿ, ಪ್ರಮೀಳಾ ಎಸ್.ರೈ ಎಂಡೆಸಾಗು, ಪ್ರಜ್ಞಾ ರವಿರಾಜ್ ರೈ ಗುತ್ತು, ಗಣೇಶ್ ಬಿ.ಜಿ.ಬಾಲಾಯ, ರೇಖಾ ರೈ ನಿಡ್ಯಾಣ, ಕಿರಣ್ ರಾಜ್ ಕೊಡುಂಗೋಣಿ, ಕಿಶೋರ್ ಗೌಡ ದರ್ಬೆ. ಅಣ್ಣು ಟಿ. ಗಾಂಧಿನಗರ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net