

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ನೆಪದಲ್ಲಿ ನನ್ನ ಶರ್ಟ್ ಬಿಚ್ಚುವಂತೆ ಭದ್ರತಾ ಸಿಬ್ಬಂದಿ ಒತ್ತಾಯಿಸಿದರು. ಇದೊಂದು ಅವಮಾನಕರ ಮತ್ತು ಮುಜುಗರ ಘಟನೆ ಎಂದು ಮಹಿಳೆಯೊಬ್ಬರು ಟ್ವೀಟ್ ಮೂಲಕ ಆರೋಪಿಸಿದ್ದಾರೆ. ಮಹಿಳೆಯರೇಕೆ ಬಟ್ಟೆ ಬಿಚ್ಚಬೇಕು ಎಂದು ಮಹಿಳೆ ಪ್ರಶ್ನಿಸಿದ್ದಾರೆ.
ತಪಾಸಣೆ ನೆಪದಲ್ಲಿ ಶರ್ಟ್ ತೆಗೆಯಿರಿ ಅಂತ ಹೇಳಿದ್ದು ನನಗೆ ಬಹಳ ಮುಜುಗರ ಉಂಟುಮಾಡಿತು. ಅಷ್ಟೇ ಅಲ್ಲ ಇದರಿಂದ ನನಗೆ ಅವಮಾನವಾಗಿದೆ. ಮಹಿಳೆಯರಿಗೆ ಇದೊಂದು ಕಿರಿಕಿರಿ ಅನುಭವ ಸಂಗತಿ ಎಂದು ಕ್ರಿಷಾನಿ ಗಾದ್ವಿ ಎಂಬುವವರು ಅಸಮಾಧಾನ ಹೊರಹಾಕಿದ್ದರು.
ಸಿಐಎಸ್ಎಫ್ ಸಿಬ್ಬಂದಿ ವಿರುದ್ಧ ಮಹಿಳೆ ಟ್ವೀಟ್ ಮಾಡುತ್ತಿದ್ದಂತೆ ವಿಷಾದ ವ್ಯಕ್ತಪಡಿಸಿದ ವಿಮಾನ ನಿಲ್ದಾಣ ಅಧಿಕಾರಿಗಳು, ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಪ್ರತಿ ಟ್ವೀಟ್ ಮಾಡಿದ್ದರು. ಆದರೆ ಈ ಬಗ್ಗೆ ಮಹಿಳೆ ವಿಮಾನ ನಿಲ್ದಾಣದಲ್ಲಿ ಏಕೆ ದೂರು ದಾಖಲಿಸಲಿಲ್ಲ ಎಂದು ಬೇರೆ ಏಜೆನ್ಸಿಗಳು ಪ್ರಶ್ನಿಸಿವೆ. ಇಷ್ಟೆಲ್ಲಾ ಆದ ಮೇಲೆ ಮಹಿಳೆ ಇದೀಗ ತನ್ನ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ.