

ಕಾರವಾರ: ಜಿಲ್ಲೆಯಲ್ಲಿ ಅ.21 ರಿಂದ ನ.20ರ ರವರೆಗೆ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ 6 ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 3.40 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
4-5 ತಿಂಗಳ ಮೇಲ್ಪಟ್ಟ ಎಲ್ಲಾ ದನ ಮತ್ತು ಎಮ್ಮೆಗಳಿಗೆ ಕಾಲು ಬಾಯಿ ಜ್ವರದ ಲಸಿಕೆಯನ್ನು ಉಚಿತವಾಗಿ ಪ್ರತಿ ಆರು ತಿಂಗಳುಗಳಿಗೊಮ್ಮೆ ಹಾಕಲಾಗುವುದು. ಜಿಲ್ಲೆಯ ಎಲ್ಲ 1289 ಗ್ರಾಮಗಳಲ್ಲಿ ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತಿದೆ.
ಪ್ರತಿ 50-80 ಜಾನುವಾರುಗಳಿಗೆ ಒಂದು ಬ್ಲಾಕ್‌ನಂತೆ ಜಿಲ್ಲೆಯಲ್ಲಿ ಒಟ್ಟು 5138 ಬ್ಲಾಕ್‌ಗಳನ್ನು ರಚಿಸಲಾಗಿದೆ. 235 ಲಸಿಕೆದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಪ್ರತಿ ಜಾನುವಾರುಗಳಿಗೆ ಪ್ರತ್ಯೇಕ ಸಿರಿಂಜ್ ಮತ್ತು ಸೂಜಿಯನ್ನು ಬಳಸಲಾಗುವುದು. ಜಿಲ್ಲೆಯ ಎಲ್ಲ ಜಾನುವಾರುಗಳಿಗೆ ಬೇಕಾಗುವ 3,40,100 ಡೋಸ್‌ಗಳ ಕಾಲುಬಾಯಿ ಜ್ವರದ ಲಸಿಕೆ ದಾಸ್ತಾನ ಇದ್ದು, ಕಾರ್ಯಕ್ರಮಕ್ಕೆ ಅವಶ್ಯವಿರುವ ಲಸಿಕೆಯನ್ನು ಶಿರಸಿ, ಹಳಿಯಾಳ, ಕುಮಟಾ, ಕಾರವಾರ, ಯಲ್ಲಾಪುರ ತಾಲೂಕಿನಲ್ಲಿ ತಲಾ 1 ರಂತೆ ಒಟ್ಟು 5 ವಾಕ್ ಇನ ಕೂಲರ್‌ನಲ್ಲಿ ದಾಸ್ತಾನು ಇಡಲಾಗಿದೆ, ಜಿಲ್ಲೆಯ ಒಟ್ಟು 30 ಐಸ್ ಲೈನ್ ರೆಪ್ರೀಜೇಟರಗಳಿಗೆ ಐಸ್ ಕೋಲ್ಡ ವಾಹನದಲ್ಲಿ ಸಾಗಾಣಿಕೆ ಮಾಡಲಾಗುವುದು. ಜತೆಗೆ ರೈತರ ಮನೆಯಲ್ಲಿರುವ ನಾಯಿ ಹಾಗೂ ಬೆಕ್ಕುಗಳಿಗೆ ರೇಬೀಸ್ ರೋಗದ ಲಸಿಕೆಯನ್ನು ಉಚಿತವಾಗಿ ಹಾಕಲಾಗುವುದು ಎಂದು ಪಶು ವೈದ್ಯಕೀಯ ಸೇವೆಗಳ ಇಲಾಖೆ ಪ್ರಕಟಣೆ ತಿಳಿಸಿದೆ.