ಕಾರವಾರ: ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿದ ಅಬಕಾರಿ ಇನ್ಸ್ಪೆಕ್ಟರ್ ಸದಾಶಿವ ಕೊರ್ತಿ ಹಾಗೂ ಪೇದೆ ಹೇಮಚಂದ್ರ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಲಾರಿ ಚಾಲಕ ಹಾಗೂ ಮಾಲೀಕರ ಸಂಘದ ಪದಾಧಿಕಾರಿಗಳು ಮಾಜಾಳಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಕಾರವಾರ-ಗೋವಾ ಅಂತಾರಾಜ್ಯ ಗಡಿಯಲ್ಲಿ ಚೆಕ್ ಪೋಸ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನ ಸಂಚಾರವನ್ನು ಸಾಂಕೇತಿಕವಾಗಿ ತಡೆದು, ಪ್ರತಿಭಟನೆ ನಡೆಸಿದರು. ಅಬಕಾರಿ ಅಧಿಕಾರಿಗಳ ವಿರುದ್ಧ ಕ್ರಮ ವಹಿಸದೇ ಇದ್ದರೆ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ಹೋಗಲಿದೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟ ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ಆರ್.ಷಣ್ಮುಗಪ್ಪ ಮಾತನಾಡಿ, `ಗೋವಾದಿಂದ ಕೇರಳಕ್ಕೆ ವಾಟರ್ ಫಿಲ್ಟರ್ ತುಂಬಿಕೊಂಡು ಹೋಗುತ್ತಿದ್ದ ಲಾರಿಯನ್ನು ಕರ್ನಾಟಕ-ಗೋವಾ ಗಡಿಯ ಮಾಜಾಳಿ ಸಂಯುಕ್ತ ತನಿಖಾ ಠಾಣೆಯಲ್ಲಿ ತಡೆದ ಅಬಕಾರಿ ಅಧಿಕಾರಿಗಳು ಚಾಲಕ ಕುಮಾರ್ ಎಂಬುವವನ ಮೇಲೆ ಹಲ್ಲೆ ನಡೆಸಿದ್ದಾರೆ. ಮಾಜಾಳಿ ತನಿಖಾ ಠಾಣೆಯಲ್ಲಿ ಅಬಕಾರಿ ಅಧಿಕಾರಿಗಳ ಭ್ರಷ್ಟಾಚಾರ, ಲಾರಿ ಚಾಲಕರಿಗೆ ಕಿರುಕುಳ ಮುಂತಾದವನ್ನು ಮಾಡುತ್ತಿರುವ ಬಗ್ಗೆ ಈ ಹಿಂದೆಯೂ ಸಾಕಷ್ಟು ಬಾರಿ ಎಚ್ಚರಿಸಿದ್ದೆವು. ಆದರೆ, ಅದರ ವಿರುದ್ಧ ಕ್ರಮವಾಗಿಲ್ಲ. ಇದರಿಂದ ಅಕ್ರಮಗಳು ಮುಂದುವರಿದಿವೆ.
ಈಗ ಆರೋಪ ಹೊತ್ತಿರುವ ಇಬ್ಬರು ಅಬಕಾರಿ ನೌಕರರನ್ನು ಅಮಾನತು ಮಾಡಬೇಕು. ಚಾಲಕನ ಚಿಕಿತ್ಸೆಗೆ ಅಬಕಾರಿ ಇಲಾಖೆಯಿಂದ ಪರಿಹಾರ ಒದಗಿಸಬೇಕು. ಚಾಲಕನ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು. ಮಾಜಾಳಿ ಹಾಗೂ ಇತರ ತನಿಖಾ ಠಾಣೆಗಳ ಬಗ್ಗೆ ತನಿಖೆ ನಡೆಸಬೇಕು. ಈಗ ನಾವು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದೇವೆ. ಇಲ್ಲದೇ ಇದ್ದಲ್ಲಿ ತೀವ್ರ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ಒಕ್ಕೂಟದ ಉಪಾಧ್ಯಕ್ಷ ಪಿ.ಎಸ್.ಮಣಿ ಮಾತನಾಡಿ, ಲಾರಿಗಳು ಓಡಾಡಿದರೆ ಮಾತ್ರ ರಾಜ್ಯಕ್ಕೆ ಅನ್ನ ಸಿಗುತ್ತದೆ. ಚಾಲಕರು ಕಾರ್ಯ ನಿರ್ವಹಿಸಿದರೆ ಮಾತ್ರ ರಾಜ್ಯದ ಅಭಿವೃದ್ಧಿಯಾಗುತ್ತದೆ. ಆದರೆ, ಚಾಲಕರನ್ನು ಕೀಳಾಗಿ ಕಾಣುವ ಪ್ರವೃತ್ತಿ ಹೋಗಬೇಕು ಎಂದು ಎಚ್ಚರಿಕೆ ನೀಡಿದರು.
ಕಾರ್ಯದರ್ಶಿ ಅರವಿಂದ ಅಪ್ಪಾಜಿ ಮಾತನಾಡಿ, ಲಾರಿ ಮಾಲೀಕರ ಸಂಘಟನೆಯಾಗಿದ್ದರೂ, ಲಾರಿ ಚಾಲಕರ ಸಂಕಷ್ಟಗಳಿಗೆ ಸ್ಪಂದಿಸಲಾಗುತ್ತಿದೆ. ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಲಾರಿಗಳು ರಸ್ತೆಯಲ್ಲಿ ನಿಂತಾಗ ಅವರಿಗೆ ನಮ್ಮ ಸಂಘಟನೆ ನೆರವಾಗಿತ್ತು. ಲಾರಿ ಚಾಲಕರ ಸಮಸ್ಯೆಗಳಿಗೆ ಗೋವಾ ಲಾರಿ ಮಾಲೀಕರ ಸಂಘಟನೆಯ ಪದಾಧಿಕಾರಿಗಳು ಮಾತನಾಡಿದರು.
ಕಾರವಾರ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಮಾಧವ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಇದು ಟೆಸ್ಟ್ ಡೋಸ್ ಮಾತ್ರ. ನಮ್ಮ ಬೇಡಿಕೆ ಈಡೇರದೇ ಇದ್ದರೆ ಪ್ರತಿಭಟನೆ ಮುಂದುವರಿಯಲಿದೆ. ಕಾರವಾರ ಸೂಕ್ಷ್ಮ ಪ್ರದೇಶ ಇಲ್ಲಿ ರಕ್ಷಣೆ ಅಗತ್ಯ, ವಾಹನಗಳ ತಪಾಸಣೆ ಮಾಡುವುದು ಸರಿ. ಆದರೆ, ಆ ನೆಪದಲ್ಲಿ ಭ್ರಷ್ಟಾಚಾರ ಮತ್ತು ಕಿರುಕುಳ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ಡಿವೈಎಸ್‌ಪಿ ಗಿರೀಶ ಎಸ್.ವಿ.ಅವರನ್ನು ಸನ್ಮಾನಿಸಲಾಯಿತು. ಕರವೇ, ಟ್ಯಾಕ್ಸಿ ಚಾಲಕರ ಸಂಘ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಮಾಜಾಳಿ ತನಿಖಾ ಠಾಣೆಯ ಇನ್ಸ್‌ಪೆಕ್ಟರ್, ಕಾನ್‌ಸ್ಟೇಬಲ್ ವರ್ಗhttps://www.vijayavani.net/majali-check-post-inspector-constable-transfer