

ಮುಂದುವರಿದ ಭಾಗ..
ಆದರೆ ಹೂವಿಗೆ ಕೀಟ ಮತ್ತು ಪಕ್ಷಿಗಳು ಬಂದು ಕುಳಿತಾಗ ಹೂವಿನ ದಳಗಳು ಅವುಗಳ ತೂಕವನ್ನು ತಾಳಲಾರದೆ ಉದುರಿಹೋಗುತ್ತಿದ್ದವು, ಗಾಳಿಯ ರಭಸಕ್ಕೆ ಬಿದ್ದುಹೋಗುತ್ತಿದ್ದವು, ಮಳೆ ಹನಿಯ ಹೊಡೆತವನ್ನು ಸಹಿಸಲಾದವು. ನೀರಿನಿಂದ ಬ್ರೂಣವು ಕರಗಿಹೋಗುತ್ತಿತ್ತು, ಬೀಜವು ಗಟ್ಟಿಯಾಗಿ ನಿಲ್ಲದೆ ಸತ್ತುಹೋಗುತ್ತಿತ್ತು ಆದ್ದರಿಂದ ಸಂತಾನಾಭಿವೃದ್ಧಿಗೆ ತೊಂದರೆಯಾಗುತ್ತಿತ್ತು.
ಈ ಕಷ್ಟವನ್ನು ಅರಿತ ಸಸ್ಯಗಳು, ಹೂವಿನ ದಳ ಮತ್ತು ಬ್ರೂಣದ ರಕ್ಷಣೆಗಾಗಿ, ಹಲವು ತಲೆಮಾರುಗಳ ಪ್ರಯೋಗದಲ್ಲಿ ಹಂತ ಹಂತವಾಗಿ ಪುಷ್ಪಪಾತ್ರೆಯನ್ನು (ಸೆಪೆಲ್) ಸೃಷ್ಟಿಮಾಡಿಕೊಂಡವು. ಇದು ಸಸ್ಯಗಳಲ್ಲಿ ಇನ್ನೊಂದು ಅತಿ ದೊಡ್ಡ ಆವಿಷ್ಕಾರವಾಯಿತು. ಪುಷ್ಪಪಾತ್ರೆಯ ಸೃಷ್ಟಿಯ ನಂತರ ಇವುಗಳ ವಿಕಾಸ ಬಹಳ ವೇಗವಾಗಿ ಬೆಳೆಯಿತು. ಹಲವಾರು ಬಗೆಯ ಪರಾಗಸ್ಪರ್ಶಕಗಳು ವಿಕಾಸಗೊಂಡವು. ಪರಾಗಸ್ಪರ್ಶಕಗಳ ಅಭಿರುಚಿಗೆ ತಕ್ಕಂತೆ ಹೂವುಗಳಲ್ಲಿ ವಿವಿಧ ರೀತಿಯ ಬಣ್ಣ ಮತ್ತು ವಾಸನೆಯನ್ನು ವೃದ್ಧಿಗೊಳಿಸಿದವು.
ಹೀಗೆ ಪ್ರತಿಹಂತದಲ್ಲಿಯೂ ಕೂಡ ನಾನಾ ತರದ ಅಭಿವೃದ್ಧಿಯನ್ನು ಮಾಡಿಕೊಂಡು, ಮುಂದಿನ ಸಂತತಿಯಲ್ಲಿ ತನ್ನ ಹಾರ್ಮೋನ್‌ಗಳಲ್ಲಿ ಮತ್ತು ಅಂಗಾಂಗಗಳಲ್ಲಿ ಬದಲಾವಣೆ ಮಾಡಿಕೊಂಡು ಸಸ್ಯಗಳು ವಿಕಾಸಗೊಂಡು ಬೆಳೆದಿವೆ. ಈಗ ನಾವು ತಿನ್ನುವ ಸೇಬು ಹಣ್ಣು, ಈಗಿನ ಸ್ಥಿತಿಗೆ ಬರುವುದರೊಳಗೆ, ಹಲವಾರು ಬಗೆಯ ರುಚಿ, ಬಣ್ಣ, ಗಾತ್ರಗಳನ್ನು ಬದಲಾವಣೆ ಮಾಡಿಕೊಂಡು ಇಂದಿನ ಸ್ಥಿತಿಗೆ ಬಂದಿದೆ. ಇದೇ ರೀತಿ ಈಗಲೂ ಕೂಡ ಪ್ರತಿ ಸಂತತಿಯಲ್ಲಿ ಬದಲಾವಣೆ ನಡೆಯುತ್ತಲೇ ಇದೆ, ಇನ್ನು ಮುಂದಿನ ಪೀಳಿಗೆಯಲ್ಲಿಯೂ ಬದಲಾವಣೆ ನಡೆಯುತ್ತಲೇ ಇರುತ್ತದೆ.