

ವಿಜಯಪುರ: ಪ್ರವಾಹವೂ ತಗ್ಗಿದೆ, ಪರಿಹಾರವೂ ಕೊಟ್ಟಾಗಿದೆ ಇದೀಗ ಪ್ರವಾಸ ಕೈಗೊಂಡಿರುವ ಬಿಜೆಪಿ ನಾಯಕರ ನಡೆ ಟ್ರೇನ್ ಹೋದ ಮೇಲೆ ಟಿಕೆಟ್ ತೆಗೆದುಕೊಂಡಂತಾಗಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.
ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ನಡೆಸಿ ತ್ವರಿತವಾಗಿ ಪರಿಹಾರ ಘೋಷಣೆ ಮಾಡಿದ್ದಾರೆ. ಎನ್‌ಡಿಆರ್‌ಎಫ್ ನಿಯಮವಾಳಿಗಿಂತ ಹೆಚ್ಚಾಗಿ ಅಂದರೆ ಒಂದು ಹೆಕ್ಟರ್‌ಗೆ ಸುಮಾರು 17 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದೇವೆ. ಬಿಜೆಪಿಗರಿಗೆ ತಾಕತ್ ಇದ್ದರೆ ದೆಹಲಿಗೆ ತೆರಳಿ ಕೇಂದ್ರದಿಂದ ಪರಿಹಾರ ಒದಗಿಸಲಿ ಎಂದಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಬರುತ್ತಿಲ್ಲ. 14 ಮತ್ತು 15ನೇ ಹಣಕಾಸು ಯೋಜನೆಯಡಿ ಸುಮಾರು 70 ಸಾವಿರ ಕೋಟಿ ರೂಪಾಯಿ ಬಾರದೆ ರಾಜ್ಯಕ್ಕೆ ಅನ್ಯಾಯವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ 5800 ಕೋಟಿ ಕ್ಯಾಬಿನೆಟ್‌ನಲ್ಲಿ ಘೋಷಣೆಯಾಗಿದ್ದ ಹಣದಲ್ಲಿ ಒಂದು ರೂಪಾಯಿಯಾದರೂ ಬಂದಿದೆಯಾ ಎಂದು ಮರು ಪ್ರಶ್ನೆ ಎಸೆದಿದ್ದಾರೆ.
ಬಿಜೆಪಿಯವರು ರಾಜ್ಯದಲ್ಲೇ ಸುಮ್ಮನೇ ಸುತ್ತಾಡುತ್ತಿದ್ದಾರೆ. ಬಿಜೆಪಿಯಲ್ಲಿ ಮನೆಯೊಂದು ನೂರು ಬಾಗಿಲುಗಳಿವೆ. ಆರ್.ಅಶೋಕ್, ಬಿ.ವೈ. ವಿಜಯೇಂದ್ರ, ಪ್ರಲ್ಹಾದ್ ಜೋಶಿ, ವಿ.ಸೋಮಣ್ಣ ಸೇರಿದಂತೆ ಸುಮಾರು ಏಳೆಂಟು ತಂಡಗಳಿವೆ ಎಂದು ಎಂ.ಬಿ. ಪಾಟೀಲ್ ಲೇವಡಿ ಮಾಡಿದ್ದಾರೆ. ರಾಜ್ಯದಲ್ಲಿ ಮತ್ತೆ ಪವರ್ ಶೇರಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಂ.ಬಿ ಪಾಟೀಲರು, ನಮ್ಮ ಪಕ್ಷದಲ್ಲಿ ಎಲ್ಲಾ ವಿಚಾರ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಯಾರು ಹೇಳಿದರೂ ಸಂಬಂಧವಿಲ್ಲ, ಯಾರಿಗೂ ಹೇಳುವ ಅಧಿಕಾರವಿಲ್ಲ, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದಿದ್ದಾರೆ.