ರಸ್ತೆಯುದ್ದಕ್ಕೂ ಫ್ಲೆಕ್ಸ್ ಅಬ್ಬರ

Ull_Flex
Published on

ಅನ್ಸಾರ್ ಇನೋಳಿ ಉಳ್ಳಾಲ

ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳ ಆಡಳಿತ ಅಂತ್ಯಗೊಳ್ಳುತ್ತಲೇ ನಗರದ ಅಂದ ಕೆಡಿಸುತ್ತಿದ್ದ ಕಾನೂನುಬಾಹಿರ ಬ್ಯಾನರ್, ಫ್ಲೆಕ್ಸ್‌ಗಳ ವಿರುದ್ಧ ಅಧಿಕಾರಿ ವರ್ಗ ಸಮರ ಸಾರಿ ತೆರವುಗೊಳಿಸಿದೆ. ಉಳ್ಳಾಲ ಭಾಗದಲ್ಲಿ ಬ್ಯಾನರ್, ಫ್ಲೆಕ್ಸ್‌ಗಳ ಹಾವಳಿ ಮಿತಿಮೀರಿದ್ದು, ಆಡಳಿತ ವರ್ಗ ಅಸಹಾಯಕವಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಅಳವಡಿಸಬೇಕಾದರೆ ಸ್ಥಳೀಯಾಡಳಿತದಿಂದ ಅನುಮತಿ ಪಡೆದು ಸುತ್ತಳತೆಗೆ ತಕ್ಕಂತೆ ಶುಲ್ಕ ಪಾವತಿಸಬೇಕು. ಸ್ಥಳೀಯಾಡಳಿತ ನೀಡುವ ಅನುಮತಿ ಸಂಖ್ಯೆ ನಮೂದಿಸಬೇಕು. ಸಾರ್ವಜನಿಕರು, ವಾಹನಗಳಿಗೆ ತೊಂದರೆಯಾಗದಂತೆ ಬ್ಯಾನರ್, ಫ್ಲೆಕ್ಸ್ ಅಳವಡಿಸಬೇಕು. ಕಾರ್ಯಕ್ರಮ ಮುಗಿದ 24 ಗಂಟೆಯೊಳಗೆ ಸಂಬಂಧಪಟ್ಟವರೇ ತೆರವುಗೊಳಿಸಬೇಕು. ಸಂಬಂಧಪಟ್ಟವರು ತಮ್ಮ ಸಂಪರ್ಕ ಸಂಖ್ಯೆಯನ್ನು ಸ್ಥಳೀಯಾಡಳಿತ, ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಬಟ್ಟೆ ಬ್ಯಾನರ್ ಮಾತ್ರ ಬಳಸಬೇಕು ಎನ್ನುವುದು ಸರ್ಕಾರದ ನಿಯಮ. ಸ್ಥಳೀಯಾಡಳಿತ ಇದೇ ನಿಯಮದಡಿ ಅನುಮತಿ ನೀಡುತ್ತದೆ. ಆದರೆ ಈ ನಿಯಮಗಳನ್ನು ಗಾಳಿಗೆ ತೂರಿದ್ದು ಎಲ್ಲೆಡೆ ಫ್ಲೆಕ್ಸ್, ಬ್ಯಾನರ್‌ಗಳು ರಾರಾಜಿಸುತ್ತಿವೆ.

ಹಿಂದೆಲ್ಲಾ ಕೆಲವು ಕಡೆಗಳಲ್ಲಿ ಬ್ಯಾನರ್, ಬಂಟಿಂಗ್ಸ್‌ಗಳೇ ಘರ್ಷಣೆಗೆ ಕಾರಣವಾದ ಬಳಿಕ ನಿಯಮ ಬಿಗಿಗೊಳಿಸಲಾಗಿತ್ತು. ಆದರೆ ಪಾಲನೆಯಾಗಿದ್ದು ಮಾತ್ರ ಅಷ್ಟಕ್ಕಷ್ಟೇ.

ಅನುಮತಿಗಿಂತ ಹೆಚ್ಚು ಫ್ಲೆಕ್ಸ್ ಅಳವಡಿಕೆ:

ಧಾರ್ಮಿಕ ಕಾರ್ಯಕ್ರಮಗಳಿದ್ದರೆ ರಾಜಕಾರಣಿಗಳು, ಜನಪ್ರತಿನಿಧಿಗಳು, ಸಂಬಂಧಿಕರ ಫೋಟೋಗಳನ್ನು ಪೈಪೋಟಿಯಲ್ಲಿ ಅಳವಡಿಸಲಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಕೆಲವು ಕಡೆಗಳಲ್ಲಿ ಅನುಮತಿ ಪಡೆದರೂ ಅನುಮತಿಗಿಂತ ನಾಲ್ಕು ಪಟ್ಟು ಅಳವಡಿಸಿದರೆ, ಕೆಲವು ಕಡೆಗಳಲ್ಲಿ ಅನುಮತಿ ಪಡೆಯುವವರೂ ಇಲ್ಲ. ಅಧಿಕಾರಿಗಳು ಕಾನೂನಿನ ಬಗ್ಗೆ ಮಾತನಾಡಿದರೆ ರಾಜಕಾರಣಿಗಳಿಗೆ ಅದುವೇ ಆಹಾರವಾಗಿ ಪರಿಣಮಿಸುತ್ತದೆ. ಯಾವುದೇ ಕಾರ್ಯಕ್ಕೆ ತಗುಲುವ ಖರ್ಚಿಗಿಂತಲೂ ಹೆಚ್ಚಿನ ಖರ್ಚು ಬ್ಯಾನರ್, ಫ್ಲೆಕ್ಸ್‌ಗೆ ಮುಗಿಯುತ್ತದೆ. ಪ್ರಚಾರ ಪ್ರಿಯರಂತೂ ಕಾರ್ಯಕ್ರಮಗಳ ಸಂದರ್ಭ ಶುಭಕೋರುವ ನೆಪದಲ್ಲಿ ತಮ್ಮ, ಕುಟುಂಬಸ್ಥರ ಫೋಟೋಗಳನ್ನು ಬ್ಯಾನರ್, ಫ್ಲೆಕ್ಸ್‌ನಲ್ಲಿ ಅಳವಡಿಸಿ ಮಿಂಚುವುದೂ ಇದೆ.

ಅಶಾಂತಿಗೂ ಕಾರಣ!:

ಬ್ಯಾನರ್, ಫ್ಲೆಕ್ಸ್‌ಗಳು ಉಳ್ಳಾಲ ಭಾಗದಲ್ಲಿ ಸಾಕಷ್ಟು ಬಾರಿ ಅಶಾಂತಿಗೆ ಕಾರಣವಾಗಿತ್ತು. ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಅಳವಡಿಸಲಾಗುವ ಬ್ಯಾನರ್, ಫ್ಲೆಕ್ಸ್‌ಗಳಿಗೆ ಹಾನಿಮಾಡಿ ಕೋಮು ಸಾಮರಸ್ಯ ಕದಡಿದ ಉದಾಹರಣೆ ಇದೆ. ಅದೇ ರೀತಿ ರಾಜಕಾರಣಿಗಳು, ಜನಪ್ರತಿನಿಧಿಗಳ ಭಾವಚಿತ್ರಗಳಿಗೆ ಹಾನಿ ಮಾಡಿ ಪ್ರತಿಭಟನೆ, ಆರೋಪ, ಪ್ರತ್ಯಾರೋಪ, ಪೊಲೀಸ್ ಠಾಣೆ ಮೆಟ್ಟಿಲೇರುವ ಮೂಲಕ ರಾಜಕೀಯ ಹಗ್ಗಜಗ್ಗಾಟಕ್ಕೂ ಕಾರಣವಾದಂತಹ ಉದಾಹರಣೆ ಇದೆ. ಆ ಸಂದರ್ಭದಲ್ಲೆಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸುವ ಬ್ಯಾನರ್, ಫ್ಲೆಕ್ಸ್‌ಗಳಿಗೆ ಅನುಮತಿ ಕಡ್ಡಾಯ ಎನ್ನುವ ಕೂಗು ಕೇಳಿ ಬರುತ್ತಿತ್ತು. ಪ್ರಸಕ್ತ ದಿನಗಳಲ್ಲಿ ಈ ಹಾವಳಿ ಮಿತಿಮೀರಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳ ಆಡಳಿತ ಬಂದರೆ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಗಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಸಾರ್ವಜನಿಕರಲ್ಲಿ ಅಸಮಾಧಾನ

ಶಿಕ್ಷಣ ಸಂಸ್ಥೆಗಳೂ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಈ ಸಂದರ್ಭ ಸರ್ಕಾರದ ಎಲ್ಲ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ರಸ್ತೆ ಬದಿ, ಡಿವೈಡರ್‌ಗಳಲ್ಲಿ ಬ್ಯಾನರ್, ಫ್ಲೆಕ್ಸ್ ಅಳವಡಿಸುತ್ತಿರುವುದರಿಂದ ಸಾಕಷ್ಟು ಅಪಘಾತ ನಡೆಯುತ್ತಿದೆ. ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುವುದರಿಂದ ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ. ಬ್ಯಾನರ್ ಪ್ರಿಯರ ಪ್ರಚಾರದ ಹಪಾಹಪಿ ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು ಕಟ್ಟುನಿಟ್ಟಿನ ಕ್ರಮ ಅಗತ್ಯ ಎಂಬ ಆಗ್ರಹ ವ್ಯಕ್ತವಾಗಿದೆ.

ರಾಜಕಾರಣಿಗಳಲ್ಲೇ ಪೈಪೋಟಿ!

ಪ್ರಸ್ತುತ ದಿನಗಳಲ್ಲಿ ಯಾವುದೇ ಕಾರ್ಯಕ್ರಮ ಇದ್ದರೂ ಬ್ಯಾನರ್, ಫ್ಲೆಕ್ಸ್‌ಗಳು ಎಲ್ಲೆಂದರಲ್ಲಿ ತಲೆಎತ್ತುತ್ತಿವೆ. ಸಂಘಟನೆಗಳು ನಡೆಸುವ ಕ್ರೀಡಾಕೂಟಗಳಿಗೂ ರಸ್ತೆ ಬದಿ, ಡಿವೈಡರ್‌ಗಳಲ್ಲಿ ದೊಡ್ಡ ದೊಡ್ಡ ಬ್ಯಾನರ್, ಫ್ಲೆಕ್ಸ್ ಅಳವಡಿಸಲಾಗುತ್ತದೆ. ಇದರಲ್ಲಿ ಜನಪ್ರತಿನಿಧಿಗಳು, ರಾಜಕಾರಣಿಗಳು, ಅವರ ಸಹೋದರರು, ಸಂಬಂಧಿಕರ ಭಾವಚಿತ್ರ ಅಳವಡಿಸಿ ಸ್ಥಳೀಯ ಸಂಸ್ಥೆ ಅಧಿಕಾರಿಗಳ ಕೈಕಟ್ಟಿ ಹಾಕಲಾಗುತ್ತಿದೆ.

ಸಾರ್ವಜನಿಕ ಸ್ಥಳದಲ್ಲಿ ಫ್ಲೆಕ್ಸೃ್, ಬ್ಯಾನರ್, ಬಂಟಿಂಗ್ಸ್ ಅಳವಡಿಸಬೇಕಾದರೆ ಸ್ಥಳೀಯಾಡಳಿತದಿಂದ ಅನುಮತಿ ಪಡೆಯುವುದು ಕಡ್ಡಾಯ. ಕೆಲವರು ಅನುಮತಿ ಪಡೆಯದೆ ಅಳವಡಿಸುತ್ತಿದ್ದಾರೆ. ನಿಯಮ ಪಾಲನೆ ಬಗ್ಗೆ ಏ.7ರಂದು ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು. ಮತ್ತಡಿ, ಪೌರಾಯುಕ್ತ, ಉಳ್ಳಾಲ ನಗರಸಭೆ ಪ್ಲಾಸ್ಟಿಕ್ ನಿಷೇಧ ಅಧಿನಿಯಮ ಮತ್ತು ಸ್ವಚ್ಛತಾ ನೀತಿ ನಿಯಮಗಳ ಪ್ರಕಾರ ನಿಷೇಧಿತ ವಸ್ತುವಾಗಿರುವ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಬಳಸುವಂತಿಲ್ಲ. ಮಂಗಳೂರು ನಗರದಲ್ಲಿ ವಾಧ್ಯಮದವರ ಪ್ರೇರಣೆಯಿಂದ ಒಂದು ಹಂತದ ಗೆಲುವು ಸಿಕ್ಕಿದ್ದು ಅಧಿಕಾರಿಗಳು ಉಳಿಸಿಕೊಳ್ಳಬೇಕು. ಜನರು ಸಹಕಾರ ನೀಡಬೇಕು. ಇದು ಮುಂದುವರಿದರೆ ಮಂಗಳೂರು ನಗರ ದೇಶದಲ್ಲೇ ಪ್ರಥಮ ಆಗುವ ಸಾಧ್ಯತೆ ಇದೆ. ಕಸದಲ್ಲಿ ಹೋದ ಗೌರವ ಹೀಗಾದರೂ ಪಡೆದುಕೊಳ್ಳೋಣ. ಮನಪಾ ವಾದರಿಯಲ್ಲಿ ಜಿಲ್ಲಾದ್ಯಂತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ ನಿಷೇಧಕ್ಕೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿಬೇಕು ಶೀನ ಶೆಟ್ಟಿ, ಜಿಲ್ಲಾ ಸ್ವಚ್ಛತಾ ರಾಯಭಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net