ಎರಡೂವರೆ ವರ್ಷಗಳ ನಂತರವೂ ಸುಶಾಂತ್​ ಮನೆ ಖಾಲಿ ಇದೆಯಂತೆ … ಯಾಕೆ?

Sushant Singh Rajput
Published on

ಮುಂಬೈ: ಕರೊನಾ ಮೊದಲ ಅಲೆಯ ಸಂದರ್ಭದಲ್ಲಿ ಸುಶಾಂತ್​, ಮುಂಬೈನ ತಮ್ಮ ಮನೆಯಲ್ಲಿ ಫ್ಯಾನ್​ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಾಗಿ ಎರಡೂವರೆ ವರ್ಷಗಳೇ ಆಗಿವೆ. ಆದರೂ ಅವರ ಮನೆಗೆ ಇನ್ನೂ ಯಾರೂ ಬಾಡಿಗೆಗೆ ಬಂದಿಲ್ಲ ಎಂಬ ವಿಷಯ ಬಾಲಿವುಡ್​ನಲ್ಲಿ ದೊಡ್ಡ ಸುದ್ದಿಯಾಗಿದೆ.

ಬಾಂದ್ರಾದ ಮಾಂಟ್​ ಬ್ಲಾಂಕ್​ ಬಿಲ್ಡಿಂಗ್​ನ ಆರನೇ ಮಹಡಿಯಲ್ಲಿರುವ 3600 ಚದರಡಿ ಇರುವ ಡ್ಯುಪ್ಲೆ ಮನೆಯನ್ನು ಸುಶಾಂತ್​ 2019ರ ಕೊನೆಗೆ ಬಾಡಿಗೆಗೆ ಪಡೆದಿದ್ದರು. ಮೂರು ವರ್ಷಗಳ ಕಾಲ ಅಗ್ರೀಮೆಂಟ್​ ಇದ್ದು, 2022ಕ್ಕೆ ಮನೆ ಖಾಲಿ ಮಾಡಬೇಕಿತ್ತು ಅಥವಾ ಅಗ್ರೀಮೆಂಟ್​ ನವೀಕರಿಸಬೇಕಿತ್ತು.

ಈ ಮನೆಗೆ, ಪ್ರತಿ ತಿಂಗಳು ನಾಲ್ಕೂವರೆ ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದ ಸುಶಾಂತ್, ಕೆಲವೇ ತಿಂಗಳುಗಳಲ್ಲಿ ಇನ್ನಿಲ್ಲವಾದರು. ಅವರು ಕೊನೆಯುಸಿರೆಳೆದ ನಂತರ ಮನೆ ಖಾಲಿಯಾಗಿದ್ದು, ಆ ಮನೆಯನ್ನು ಬೇರೆಯವರಿಗೆ ಬಾಡಿಗೆ ಕೊಡುವ ಪ್ರಯತ್ನ ನಡೆದಿದೆ. ಆದರೆ, ಇದುವರೆಗೂ ಆ ಮನೆಗೆ ಯಾರೂ ಬಂದಿಲ್ಲ ಎಂದು ಹೇಳಲಾಗುತ್ತಿದೆ.

ಈ ಕುರಿತು ಮಾತನಾಡಿರುವ ರಿಯಲ್​ ಎಸ್ಟೇಟ್​ ಏಜೆಂಟ್​ ರಫೀಕ್​ ಮರ್ಚೆಂಟ್​, 'ಮನೆ ಬಹಳ ಚೆನ್ನಾಗಿದೆ. ಒಳ್ಳೆಯ ಜಾಗದಲ್ಲಿದೆ. ಜನ ಈ ಮನೆಯನ್ನು ಬಾಡಿಗೆ ಪಡೆಯುವುದಕ್ಕೆ ಉತ್ಸುಕರಾಗಿರುತ್ತಾರೆ. ಆದರೆ, ಯಾವಾಗ ಈ ಮನೆಯಲ್ಲಿ ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡರು ಎಂಬ ಸುದ್ದಿ ಕೇಳುತ್ತಾರೋ, ಹಿಂದೆ ಸರಿಯುತ್ತಾರೆ. ಕೆಲವರಂತೂ ಫ್ಲಾಟ್​ ನೋಡಲು ಸಹ ಬರುವುದಿಲ್ಲ. ಈ ಮನೆಯು ಕೇಂದ್ರಬಿಂದುವಾಗಿರುವುದರಿಂದ ಯಾರೂ ಮುಂದೆ ಬರುತ್ತಿಲ್ಲ. ಬಹುಶಃ ಈ ಮನೆಯ ಮಾಲೀಕರು ಬಾಡಿಗೆ ಸ್ವಲ್ಪ ಕಡಿಮೆ ಮಾಡಿಕೊಂಡರೆ ಆಗಬಹುದೇನೋ? ಅವರು ಪ್ರತಿ ತಿಂಗಳು ಐದು ಲಕ್ಷಕ್ಕೆ ಒಂದು ರೂಪಾಯಿ ಕಡಿಮೆ ಒಪ್ಪುತ್ತಿಲ್ಲ. ಹಾಗಾಗಿ, ಈ ಮನೆಗೆ ಇನ್ನೂ ಯಾರೂ ಬಂದಿಲ್ಲ' ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net