ಮೂರು ಪ್ರತ್ಯೇಕ ಅಪಘಾತದಲ್ಲಿ ಐವರು ಸಾವು: ಹೃದಯಾಘಾತಕ್ಕೆ ಚಾಲಕ ಬಲಿ, ಮಂಡ್ಯದಲ್ಲಿ ಸುಟ್ಟು ಕರಕಲಾದ ವ್ಯಕ್ತಿ! Accident

Accident
Published on

ಶಿವಮೊಗ್ಗ/ರಾಯಚೂರು/ಮಂಡ್ಯ: ರಾಜ್ಯದಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತ ( Accident ) ಪ್ರಕರಣಗಳಲ್ಲಿ ಐವರು ಸಾವಿಗೀಡಾಗಿದ್ದಾರೆ. ಶಿವಮೊಗ್ಗದಲ್ಲಿ ಗೂಡ್ಸ್ ವಾಹನ ಮರಕ್ಕೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟರೆ, ರಾಯಚೂರಲ್ಲಿ ಹೃದಯಾಘಾತಕ್ಕೆ ಚಾಲಕ ಬಲಿಯಾಗಿದ್ದಾನೆ ಮತ್ತು ಮಂಡ್ಯದಲ್ಲಿ ಇನ್ನೋವಾ ಕಾರಿನೊಳಗೆ ವ್ಯಕ್ತಿಯೊಬ್ಬ ಸುಟ್ಟು ಕರಕಲಾಗಿದ್ದಾನೆ.

ಶಿವಮೊಗ್ಗ ನಗರದ ಹೊರವಲಯದ ಗೋಂಧಿ ಚಟ್ನಹಳ್ಳಿ ಗ್ರಾಮದ ಬಳಿ ಗುರುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಉತ್ತರ ಪ್ರದೇಶದ ಕಾರ್ಮಿಕರಿಬ್ಬರು ಸೇರಿ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ದಾವಣಗೆರೆ ಜಿಲ್ಲೆ ಚನ್ನಗಿರಿಯ ಅಸಾದುಲಾ(50), ಉತ್ತರ ಪ್ರದೇಶದ ಸಾಧಿಕ್(30) ಮತ್ತು ಫಿರೋಜ(22) ಎಂದು ಗುರುತಿಸಲಾಗಿದೆ.

ಶಿವಮೊಗ್ಗದಿಂದ ಹೊನ್ನಾಳಿ ಕಡೆಗೆ ತೆರಳುತ್ತಿದ್ದ ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ವಾಹನದಲ್ಲಿದ್ದ ನಾಲ್ವರಲ್ಲಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೃದಾಯಾಘಾತದಿಂದ ಚಾಲಕ ಸಾವು

ಹತ್ತಿ ತುಂಬಿಕೊಂಡು ಹೋಗುತ್ತಿದ್ದ ಪಿಕ್ ಅಪ್ ವಾಹನದ ಚಾಲಕನಿಗೆ ಹೃದಾಯಾಘಾತ ಸಂಭವಿಸಿದ ಪರಿಣಾಮ ವಾಹನ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ರಾಯಚೂರಿನ ಗಾರಲದಿನ್ನಿ ಹತ್ತಿರ ನಡೆದಿದೆ. ಮೃತ ಚಾಲಕನನ್ನು ನರಸಿಂಹ (33) ಎಂದು ಗುರುತಿಸಲಾಗಿದೆ.

ಗುರುವಾರ ಬೆಳಗ್ಗೆ ಹತ್ತಿ ತುಂಬಿಕೊಂಡು ರಾಯಚೂರು ಹತ್ತಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವಾಗ ಎದೆನೋವು ಕಾಣಿಸಿಕೊಂಡಿದ್ದು, ವಾಹನ ನಿಯಂತ್ರಣ ತಪ್ಪಿ ಪಕ್ಕದ ಜಮೀನಿನಲ್ಲಿ ಪಲ್ಟಿಯಾಗಿದೆ. ನರಸಿಂಹನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯಯೇ ಮೃತಪಟ್ಟಿದ್ದಾನೆ. ವಾಹನದಲ್ಲಿ ತುಂಬಿದ್ದ ಹತ್ತಿಯಲ್ಲ ಹೊಲದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಯರಾಗೇರ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಸುಟ್ಟು ಕರಕಲಾದ ವ್ಯಕ್ತಿ

ಟಿಪ್ಪರ್ ಲಾರಿ ಮತ್ತು ಇನ್ನೋವಾ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನೊಳಗಿದ್ದ ವ್ಯಕ್ತಿಯೊಬ್ಬ ಸುಟ್ಟು ಕರಕಲಾಗಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಶ್ರೀರಂಗಪಟ್ಟಣ-ಕೆ.ಆರ್.ಎಸ್ ಮಾರ್ಗದ ಪಾಲಹಳ್ಳಿ- ಹೊಸಹಳ್ಳಿ ನಡುವಿನ ಎ.ಚಿ‌ ತೋಪು ಬಳಿ ನಡೆದಿದೆ. ಮೃತಪಟ್ಟಿರುವುದು ಹುಣಸೂರು ಮೂಲದ ವ್ಯಕ್ತಿ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net