

Murder: ಏಕಾಏಕಿ ಆಸ್ಪತ್ರೆಗೆ ನುಗ್ಗಿದ ಐವರು ದುಷ್ಕರ್ಮಿಗಳು, ಐಸಿಯುನಲ್ಲಿದ್ದ ಓರ್ವ ರೋಗಿಯನ್ನು ಭೀಕರವಾಗಿ ಗುಂಡಿಕ್ಕಿ ಕೊಂದ ಘಟನೆ ಬಿಹಾರದ ಪಾಟ್ನಾದಲ್ಲಿ ವರದಿಯಾಗಿದೆ.
ಸಾವಿಗೀಡಾದ ವ್ಯಕ್ತಿಯನ್ನು ಚಂದನ್ ಮಿಶ್ರಾ ಎಂದು ಗುರುತಿಸಲಾಗಿದೆ. ಕೊಲೆಯಾದ ಚಂದನ್ ಬಕ್ಸರ್ ಜಿಲ್ಲೆಯ ರೌಡಿಶೀಟರ್ ಆಗಿದ್ದು, ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ದೊರೆತಿದೆ. ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ.
ಪಾಟ್ನಾದ ಪರಾಸ್ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಐವರು ಆರೋಪಿಗಳು ಪಿಸ್ತೂಲ್ನೊಂದಿಗೆ ಆಸ್ಪತ್ರೆಗೆ ನುಗ್ಗಿದ್ದಾರೆ. ಈ ವೇಳೆ ಹಾಸಿಗೆ ಮೇಲೆ ಮಲಗಿದ್ದ ಮಿಶ್ರಾರನ್ನು ಗುಂಡಿಟ್ಟು ಹತ್ಯೆಗೈದಿದ್ದಾರೆ. ಘಟನೆ ನಡೆದ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದು, ಘಟನೆಯ ದೃಶ್ಯ ಆಸ್ಪತ್ರೆಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಖಾಕಿ ಭೇಟಿ ನೀಡಿ, ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ಕುರಿತು ಮಾತನಾಡಿದ ಎಸ್ಪಿ ಕಾರ್ತಿಕೇಯ ಶರ್ಮಾ, ಚಂದನ್ ಮಿಶ್ರಾ ಹತ್ಯೆಯಲ್ಲಿ ಎದುರಾಳಿ ಚಂದನ್ ಶೇರು ಗ್ಯಾಂಗ್ ಕೊಲೆ ಮಾಡಿದ್ದಾರೆ. ಘಟನೆಯಲ್ಲಿ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಭಾಗಿಯಾಗಿದ್ದಾರೆಯೇ? ಇಲ್ಲವೇ? ಎಂಬುದನ್ನು ತನಿಖೆ ಮೂಲಕ ಬಹಿರಂಗಪಡಿಸುತ್ತೇವೆ ಎಂದಿದ್ದಾರೆ.(ಏಜೆನ್ಸೀಸ್)