ನವದೆಹಲಿ: ಇಂದಿನಿಂದ (ಜುಲೈ 27) ಶ್ರೀಲಂಕಾ ವಿರುದ್ಧ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಅವರು ಈ ಸರಣಿಯ ಮೂಲಕ ಟಿ20 ಮಾದರಿಗೆ ಪೂರ್ಣಪ್ರಮಾಣದ ನಾಯಕನಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇತ್ತ ಸೂರ್ಯಕುಮಾರ್ಗೆ ನಾಯಕತ್ವ ವಹಿಸಿರುವ ಕುರಿತು ಹಲವರು ಕಿಡಿಕಾರಿದ್ದು ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಏಕೆಂದರೆ ಮಾಜಿ ನಾಯಕ ರೋಹಿತ್ ಶರ್ಮ ಅನುಪಸ್ಥಿತಿಯಲ್ಲಿ ಹಾರ್ದಿಕ್ ಹಲವು ಬಾರಿ ತಂಡವನ್ನು ಮುನ್ನಡೆಸಿದ್ದು, ತಂಡವನ್ನು ಅನೇಕ ಸರಣಿಗಳಲ್ಲಿ ಗೆಲ್ಲಿಸಿಕೊಂಡು ಬಂದಿದ್ದಾರೆ. ಇದಲ್ಲದೆ ಐಪಿಎಲ್ನಲ್ಲಿ ತಂಡವನ್ನು ಮುನ್ನಡೆಸಿದ ಅನುಭವವನ್ನು ಪಾಂಡ್ಯ ಹೊಂದಿದ್ದು, ಈ ಕಾರಣಕ್ಕಾಗಿ ಅವರಿಗೆ ನಾಯಕತ್ವ ನೀಡಬೇಕೆಂದು ಹಲವರು ಆಗ್ರಹಿಸಿದ್ದರು. ಆದರೆ, ಹಾರ್ದಿಕ್ ಅವರ ಫಿಟ್ನೆಸ್ ಕಾರಣ ನೀಡಿ ಬಿಸಿಸಿಐ ಸೂರ್ಯಕುಮಾರ್ಗೆ ಮಣೆ ಹಾಕಿದ್ದು, ಈ ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್ ತಂಡ ಮಾಜಿ ನಾಯಕ ರಶೀದ್ ಲತೀಫ್ ಮಾತನಾಡಿದ್ದು, ಬಿಸಿಸಿಐ ನಡೆಗೆ ಕಿಡಿಕಾರಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಕುರಿತು ಮಾತನಾಡಿರುವ ಲತೀಫ್, ಹಾರ್ದಿಕ್ ಫಿಟ್ನೆಸ್ ಬಗ್ಗೆ ಕಳವಳ ಹೊಂದಿದ್ದರೆ ಆತನಿಗೆ ಇವರುಗಳು ಸರ್ಟಿಫಿಕೆಟ್ ಕೊಡುವುದು ಸೂಕ್ತ. ಫಿಟ್ ಇಲ್ಲದೇ ಇರುವ ಸಾಕಷ್ಟು ಆಟಗಾರರು ತಂಡದಲ್ಲಿ ಇರುತ್ತಾರೆ. ಆದರೆ, ಹಾರ್ದಿಕ್ನಂತಹ ಶ್ರೇಷ್ಠ ನಾಯಕರು ತಂಡದಲ್ಲಿ ಇರುವುದಿಲ್ಲ ಎಂಬುದನ್ನು ಮೊದಲು ತಿಳಿಯಬೇಕು. ಆತನಿಗೆ ನಾಯಕತ್ವ ತಪ್ಪಿಸಲು ಈ ಕಾರಣವನ್ನು ನೀಡಿದ್ದಾರೆ. ನನ್ನ ಪ್ರಕಾರ ಇದೆಲ್ಲಾ ಕಾರಣವೇ ಅಲ್ಲಾ. ಭವಿಷ್ಯದ ದೃಷ್ಠಿಯಿಂದ ನೋಡುವುದಾದರೆ ಸೂರ್ಯನ ಬದಲು ರಿಷಭ್ ಪಂತ್ಗೆ ನಾಯಕತ್ವ ನೀಡುವುದು ಸೂಕ್ತ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ರಶೀದ್ ಲತೀಫ್ ಕಿಡಿಕಾರಿದ್ದಾರೆ.