CG ವರ್ಕ್​ ಮಾಡಿಸಲು 50 ಲಕ್ಷ ರೂ. ಕಮಿಷನ್​ ಪಡೆದ ಆರೋಪ; ನಿರ್ದೇಶಕ ಎಪಿ ಅರ್ಜುನ್​ ಹೇಳಿದ್ದಿಷ್ಟು

Team Martin
Published on

ಬೆಂಗಳೂರು: ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ನಟನೆಯ, ಎಪಿ ಅರ್ಜುನ್​ ನಿರ್ದೇಶನದ ಮಾರ್ಟಿನ್​ ಚಿತ್ರವು ಬಿಡುಗಡೆಗೂ ಮುನ್ನವೇ ಸಾಕಷ್ಟು ಹೈಪ್​ ಕ್ರಿಯೇಟ್​ ಮಾಡಿದ್ದು, ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. 2024ರ ಮೋಸ್ಟ್ ಎಕ್ಸ್​ಪೆಕ್ಟೆಡ್​ ಸಿನಿಮಾಗಳಲ್ಲಿ ಮಾರ್ಟಿನ್​ ಕೂಡ ಒಂದಾಗಿದ್ದು, ಅಕ್ಟೋಬರ್​ 11ರಂದು ಈ ಚಿತ್ರ ವಿಶ್ವದಾದ್ಯಂತ ತೆರೆ ಕಾಣಲಿದೆ.

2021ರಲ್ಲಿ ಸೆಟ್ಟೇರಿದ ಈ ಸಿನಿಮಾವು 2024ರ ಮಾರ್ಚ್​ 07ರಂದು ಶೂಟಿಂಗ್​ ಮುಗಿಸಿತ್ತು. ಸಿನಿಮಾದ ಚಿತ್ರೀಕರಣದ ಜೊತೆ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಬಹುತೇಕ ಮುಗಿಸಿದ್ದಾರೆ. ಕೆಲವೇ ಕೆಲವು ಕೆಲಸಗಳು ಮುಗಿದರೆ, 'ಮಾರ್ಟಿನ್' ಅದ್ಧೂರಿಯಾಗಿ ತೆರೆಮೇಲೆ ಬರುತ್ತೆ. ಇದೀಗ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ನಿರ್ದೇಶಕ ಎಪಿ ಅರ್ಜುನ್​ ಕಮಿಷನ್​ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇತ್ತ ಕಮಿಷನ್​ ಪಡೆದಿರುವ ಆರೋಪದ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ಎಪಿ ಅರ್ಜುನ್, ನನ್ನನ್ನ ಪೊಲೀಸ್ ಸ್ಟೇಷನ್‌ಗೆ ಕರೆದಿದ್ದ ಉದ್ದೇಶ ಏನಂದರೆ, ಸತ್ಯ ರೆಡ್ಡಿ ಅನ್ನೋನು ನನ್ನ ಮೇಲೆ ಆರೋಪ ಮಾಡಿದ್ದಾನೆ. ಅದಕ್ಕೆ ಪೊಲೀಸರು ನಮ್ಮನ್ನೆಲ್ಲ ವಿಚಾರಣೆಗೆ ಕರೆದಿದ್ದರು. ನನ್ನ ಮೇಲೆ ಯಾಕೆ ಆರೋಪ ಮಾಡಿದ್ದಾನೆ ಅಂತ ಗೊತ್ತಿಲ್ಲ. ಆದರೆ, ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು ಎಂಬುದು ಗೊತ್ತಾಗಿದೆ. ನನಗೆ ಅಷ್ಟೊಂದು ದುಡ್ಡು ಕೊಟ್ಟಿದ್ದರೆ, ಏನಾದರೂ ಒಂದು ದಾಖಲೆ ಇರಬೇಕಿತ್ತಲ್ಲವಾ ಎಂದು ಪ್ರಶ್ನಿಸಿದ್ದಾರೆ.

ನನಗೂ ಮಾಧ್ಯಮದ ಮೂಲಕ ವಿಷಯ ಗೊತ್ತಾಯ್ತು. 50 ಲಕ್ಷ ರೂ., 75 ಲಕ್ಷ ರೂ. ಕಮಿಷನ್ ತಗೊಂಡಿದ್ದೀನಿ ಅಂತ‌ ಆರೋಪಿಸಿ ನನ್ನನ್ನ ಕಮಿಷನ್ ಡೈರೆಕ್ಟರ್ ಅಂತೆಲ್ಲಾ ಹೇಳಿದ್ರು. ಈ ಪ್ರಕರಣದಲ್ಲಿ ಸತ್ಯ ರೆಡ್ಡಿ, ಸುನೀಲ್ ರೆಡ್ಡಿ ಇಬ್ಬರೂ ಆರೋಪಿಗಳು. ಆ ಎಫ್‌ಐಆರ್‌ನಲ್ಲೂ ನನ್ನ ಹೆಸರು ಇರಲಿಲ್ಲ.. ನನ್ನ ಮೇಲಿನ ಆರೋಪ ಸುಳ್ಳು ಅಂತ ಒತ್ತಿ ಹೇಳಿದರಲ್ಲದೇ ಅತ್ಯರೆಡ್ಡಿ ರವಿಶಂಕರ್‌ಗೂ 10 ಲಕ್ಷ ರೂ. ಮೋಸ ಮಾಡಿದ್ದಾರೆ, ಕಾಟೇರ ಸಿನಿಮಾಗೂ ಮೋಸ ಮಾಡಿದ್ದಾರೆ. ಇದಲ್ಲದೆ ಆತ  ನಮ್ಮ ಕ್ಯಾಮರಾಮ್ಯಾನ್, ಎಡಿಟರ್‌ ಹಾಗೂ ಸಹಾಯಕ ನಿರ್ದೇಶಕನ ಮೇಲೂ ಆರೋಪ ಮಾಡಿದ್ದಾನೆ. ಪೊಲೀಸರ ಮುಂದೆ ನಾನು ಏನೇನು ಹೇಳಬೇಕಿತ್ತೋ, ಎಲ್ಲಾ ಹೇಳಿದ್ದೇನೆ. ಪೊಲೀಸರ ತನಿಖೆಗೆ ಸಹಕರಿಸುತ್ತೇನೆ. ಅಕ್ಟೋಬರ್ 11 ರಂದು ಚಿತ್ರ ಬಿಡುಗಡೆಯಾಗುತ್ತದೆ ಎಂದು ನಿರ್ದೇಶಕ ಎಪಿ ಅರ್ಜುನ್​ ಹೇಳಿದ್ದಾರೆ.

ಪ್ರಕರಣದ ಹಿನ್ನಲೆ?

ಧ್ರುವ ಸರ್ಜಾ ನಟನೆಯ ಮಾರ್ಟಿನ್​ ಚಿತ್ರವು ಪ್ಯಾನ್​ ಇಂಡಿಯಾ ಸಿನಿಮಾವಾಗಿದ್ದು, ಭಾರತೀಯ ಸೇನೆಗೆ ಸಂಬಂಧಿಸಿದ ಚಿತ್ರ ಎನ್ನಲಾಗಿದೆ. ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್​ ಇದ್ದು, CG ವರ್ಕ್​ಗಾಗಿ ಚಿತ್ರತಂಡ ಟೆರೇನ್​ ಗ್ರಾಫಿಕ್ಸ್​ ಎಂಬ ಸಂಸ್ಥೆಗೆ ಹಣ ಸಂದಾಯ ಮಾಡಿದೆ. ಆದರೆ. ಟೆರೇನ್​ ಗ್ರಾಫಿಕ್ಸ್​ ಸಂಸ್ಥೆಯೂ ಹಣ ಪಡೆದು ಯಾವುದೇ ಕಲಸ ಮಾಡಿಕೊಡದೆ ವಂಚಿಸಿದೆ. ಈ ಸಂಬಂಧ ನಿರ್ಮಾಪಕ ಉದಯ್​ ಮೆಹ್ತಾ ಬಸವೇಶ್ವರನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಟೆರೇನ್​ ಸಂಸ್ಥೆಯ ಸುನೀಲ್​ ರೆಡ್ಡಿ ಹಾಗೂ ಸತ್ಯರೆಡ್ಡಿ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಇತ್ತ ವಿಚಾರಣೆ ವೇಳೆ ಆರೋಪಿಗಳು ನಿರ್ಮಾಪಕರಿಂದ CG ವರ್ಕ್​ಗಾಗಿ ಪಡೆದಿರುವ 2.5 ಕೋಟಿ ರೂ. ಹಣದಲ್ಲಿ ನಿರ್ದೇಶಕ ಎಪಿ ಅರ್ಜುನ್​ಗೆ 50 ಲಕ್ಷ ರೂ. ಕಮಿಷನ್​ ನೀಡಿರುವುದಾಗಿ ಹೇಳಿದ್ದು, ನಿರ್ದೇಶಕ ಅರ್ಜುನ್​ ವಿರುದ್ಧ ಗುರುತರ ಆರೋಪ ಕೇಳಿ ಬಂದಿತ್ತು. ಇದರ ಜೊತೆಗೆ ಮಾರ್ಟಿನ್​ ಚಿತ್ರತಂಡದಲ್ಲಿ ಭಿನ್ನಾಬಿಪ್ರಾಯಗಳಿವೆ ಎಂಬ ಆರೋಪ ಕೇಳಿ ಬಂದಿದ್ದು, ನಟ ಧ್ರುವ ಸರ್ಜಾ ಡಬ್ಬಿಂಗ್ ಮಾಡುವಾಗಲೂ ನಿರ್ದೇಶಕ ಅರ್ಜುನ್​ ಗೈರಾಗಿದ್ದರು ಎಂದು ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ತಲುಪಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net