ರಾಯಚೂರಿನ 5 ವರ್ಷದ ಬಾಲಕಿಗೆ ಜಿಕಾ ವೈರಸ್​​ ದೃಢ: ಸೋಂಕಿನ ಲಕ್ಷಣ ಕಂಡುಬಂದರೆ ಏನು ಮಾಡಬೇಕು?

Zika Virus
Published on

ಮಾನ್ವಿ (ರಾಯಚೂರು): ಎಲ್ಲೆಡೆ ತಲ್ಲಣ ಸೃಷ್ಟಿಸಿರುವ ಜಿಕಾ ವೈರಸ್​ ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಸಣ್ಣಹಳ್ಳಿಯ(ಕೋಳಿ ಕ್ಯಾಂಪ್​) ಐದು ವರ್ಷದ ಬಾಲಕಿಗೆ ಜಿಕಾ ವೈರಸ್​ ಇರುವುದು ಪತ್ತೆಯಾಗಿದ್ದು, ಚಿಕಿತ್ಸೆ ಪಡೆದು ಬಾಲಕಿ ಗುಣಮುಖವಾಗಿದ್ದರೂ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ.

ಬಾಲಕಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಪಾಲಕರು ವೈದ್ಯರಲ್ಲಿ ತೋರಿಸಿದ್ದಾರೆ. ಜ್ವರ ಕಡಿಮೆಯಾಗದ ಕಾರಣ ಸಿಂಧನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಡೆಂಘೆ ಜ್ವರಕ್ಕೆ ಚಿಕಿತ್ಸೆ ನೀಡಲಾಗಿದೆ. ಅಲ್ಲಿಯೂ ಜ್ವರ ಹತೋಟಿಗೆ ಬರಲಿಲ್ಲ. ಬಳಿಕ ಬಳ್ಳಾರಿ ವಿಮ್ಸ್​ ಆಸ್ಪತ್ರೆ ಕರೆದುಕೊಂಡು ಹೋಗಲಾಗಿದೆ. ಡಿ.5 ರಿಂದ 8ರವರೆಗೆ ಚಿಕಿತ್ಸೆ ಪಡೆದ ಬಾಲಕಿ ಗುಣಮುಖವಾಗಿದ್ದರಿಂದ ಗ್ರಾಮಕ್ಕೆ ಕರೆತರಲಾಗಿದೆ. ವಿಮ್ಸ್​ನಲ್ಲಿದ್ದಾಗ ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಿದ್ದು, ವರದಿಯಲ್ಲಿ ಜಿಕಾ ವೈರಸ್​ ಇರುವುದು ಪತ್ತೆಯಾಗಿದೆ. ಇದರಿಂದಾಗಿ ವಿಮ್ಸ್​ ವೈದ್ಯರು ಬಾಲಕಿಯ ಗ್ರಾಮಕ್ಕೆ ಬಂದು ಕುಟುಂಬಸ್ಥರ ರಕ್ತದ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಿದ್ದು, ಬಾಲಕಿ ಸೇರಿ ಕುಟುಂಬಸ್ಥರ ವರದಿ ನೆಗೆಟಿವ್​ ಬಂದಿದ್ದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ಆರೋಗ್ಯ ಇಲಾಖೆ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮವಾಗಿ ಬಾಲಕಿಯ ಸಂಪರ್ಕಕ್ಕೆ ಬಂದವರ ರಕ್ತದ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳುಹಿಸುತ್ತಿದ್ದು, ವೈರಸ್​ ಮತ್ತೊಬ್ಬರಿಗೆ ಹರಡದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಕುಟುಂಬಸ್ಥರಿಗೆ ತಿಳಿಸಲಾಗಿದೆ.

ಮಾನ್ವಿ ತಾಲೂಕಿನ ಬಾಲಕಿಯಲ್ಲಿ ಜಿಕಾ ವೈರಸ್​ ದೃಢಪಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಗತ್ಯ ಎಚ್ಚರಿಕೆ ಕ್ರ ಕೈಗೊಳ್ಳಲಾಗಿದೆ. ನೆರೆಯ ಮಹಾರಾಷ್ಟ್ರ ಮತ್ತು ಕೇರಳ ಹಾಗೂ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಪ್ರಕರಣ ವರದಿಯಾಗಿದ್ದವು. ಹಾಗಾಗಿ ರಾಜ್ಯದ ಗಡಿ ಭಾಗಗಳಲ್ಲಿ ಎಚ್ಚರ ವಹಿಸುವಂತೆ ವಿಚಕ್ಷಣಾಧಿಕಾರಿಗಳಿಗೆ ಸೂಚಿಸಿಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಈ ಸೋಂಕು ಬರುವುದು ಹೇಗೆ?: ಸೊಳ್ಳೆಗಳ ಮೂಲಕ ಹರಡುವ ಸೋಂಕು ಇದು. ಏಡಿಸ್ ಪ್ರಭೇದಕ್ಕೆ ಸೇರಿದ ಸೊಳ್ಳೆಗಳು ಕಚ್ಚುವುದರಿಂದ ಈ ಸೋಂಕು ಹರಡುತ್ತದೆ. ಈ ಸೊಳ್ಳೆಗಳು ರಾತ್ರಿ ಮಾತ್ರವಲ್ಲದೆ ಹಗಲು ಕೂಡ ಕಚ್ಚುವ ಸಾಧ್ಯತೆ ಇದೆ. ರಕ್ತ ವರ್ಗಾವಣೆ ಮತ್ತು ಅಸುರಕ್ಷಿತ ಲೈಂಗಿಕತೆಯಿಂದಲೂ ಸೋಂಕು ಹರಡಬಲ್ಲುದು.

ಜಿಕಾ ಸೋಂಕಿತರ ಲಕ್ಷಣಗಳೇನು?: ಜ್ವರ, ಸ್ನಾಯು ನೋವು, ದೇಹದ ದದ್ದುಗಳು, ತಲೆನೋವು, ಕೀಲು ನೋವು, ಕೆಂಪು ಕಣ್ಣುಗಳು ಇತ್ಯಾದಿ ಈ ಸೋಂಕಿಗೆ ಒಳಗಾಗಿರುವವರ ಸಾಮಾನ್ಯ ಲಕ್ಷಣಗಳು. ಅನೇಕ ದಿನಗಳವರೆಗೆ ಈ ಲಕ್ಷಣಗಳು ಕಾಣಿಸಿಕೊಳ್ಳಲಿವೆ. ಜಿಕಾದ ಲಕ್ಷಣಗಳು ಡೆಂಘೆ ಮತ್ತು ಚಿಕೂನ್‌ಗುನ್ಯಾದಂತಹ ಸೊಳ್ಳೆಗಳಿಂದ ಹರಡುವ ಇತರ ಕಾಯಿಲೆಗಳಿಗೆ ಹೋಲುತ್ತವೆ. ರಕ್ತ ಮತ್ತು ಮೂತ್ರವನ್ನು ಪರೀಕ್ಷಿಸಿದಾಗ ಈ ಸೋಂಕು ಇರುವುದು ಕಂಡುಬರುತ್ತದೆ.

ಸೋಂಕಿನ ಲಕ್ಷಣ ಕಂಡುಬಂದರೆ ಏನು ಮಾಡಬೇಕು?: ಸಾಕಷ್ಟು ದ್ರವ ಆಹಾರಗಳನ್ನು ತೆಗೆದುಕೊಳ್ಳುವ ಮೂಲಕ ನಿರ್ಜಲೀಕರಣವನ್ನು ತಡೆಯಬೇಕು. ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಜ್ವರ ಮತ್ತು ನೋವು ಕಡಿಮೆ ಮಾಡಲು ಔಷಧಗಳನ್ನು ತೆಗೆದುಕೊಳ್ಳಬೇಕು. ಆದಷ್ಟು ಬೇಗ ವೈದ್ಯರನ್ನು ಬೇಗನೆ ಸಂಪರ್ಕಿಸಬೇಕು.

ಸೋಂಕನ್ನು ತಡೆಗಟ್ಟುವುದು ಹೇಗೆ?: ಸಾಧ್ಯವಾದರೆ ಹವಾನಿಯಂತ್ರಿತ ಕೊಠಡಿಗಳನ್ನು ಬಳಸಬೇಕು. ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೊಳ್ಳೆ ಪರದೆ ಬಳಸಬೇಕು. ಹೊರಾಂಗಣದಲ್ಲಿ ಮಲಗುವುದನ್ನು ತಪ್ಪಿಸಬೇಕು. ಸಾಧ್ಯವಾದಷ್ಟು ಉದ್ದನೆಯ ತೋಳಿನ ಶರ್ಟ್ ಮತ್ತು ಉದ್ದವಾದ ಪ್ಯಾಂಟ್ ಧರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net