ಚೆನ್ನೈ: ಇಲ್ಲಿನ ಎಂ. ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ವನಿತೆಯರು ಬೃಹತ್ ಮೊತ್ತವನ್ನು ಪೇರಿಸುವ ಮೂಲಕ ವಿಶ್ವದಾಖಲೆ ಒಂದನ್ನು ಬರೆದಿದ್ದಾರೆ. ಅದು ಕೂಡ ಆಸ್ಟ್ರೇಲಿಯಾ ಹೆಸರಿನಲ್ಲಿದ್ದ ದಾಖಲೆ ಎಂಬುದು ಮತ್ತಷ್ಟು ವಿಶೇಷವಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ ನಾಯಕಿ ಹರ್ಮಾನ್ಪ್ರೀತ್ ಕೌರ್ ನಿರ್ಧಾರವನ್ನು ಸಮರ್ಥಿಸಿಕೊಂಡ ಆರಂಭಿಕರಾದ ಶೇಫಾಲಿ ವರ್ಮಾ (205 ರನ್, 197 ಎಸೆತ, 23 ಬೌಂಡರಿ, 8 ಸಿಕ್ಸರ್), ಸ್ಮೃತಿ ಮಂಧಾನ (149 ರನ್, 161 ಎಸೆತ, 27 ಬೌಂಡರಿ, 1 ಸಿಕ್ಸರ್) 292 ಜತೆಯಾಟವಾಡುವ ಮೂಲಕ ತಂಡಕ್ಕೆ ಭರ್ಜರಿ ಆರಂಭ ಒದಗಿಸಿ ಬೇರ್ಪಟ್ಟರು.
ಆರಂಭಿಕರಿಬ್ಬರು ಔಟಾದ ಬಳಿಕ ಬ್ಯಾಟಿಂಗ್ ಮಾಡಿದ ಜೆಮಿಮಾ ರೊಡ್ರಿಗೋಸ್ (55 ರನ್, 94 ಎಸೆತ, 8 ಬೌಂಡರಿ), ರಿಚಾ ಗೋಷ್ (86 ರನ್, 90 ಎಸೆತ, 16 ಬೌಂಡರಿ), ನಾಯಕಿ ಹರ್ಮಾನ್ಪ್ರೀತ್ ಕೌರ್ (69 ರನ್, 115 ಎಸೆತ, 4 ಬೌಂಡರಿ) ಅರ್ಧಶತಕದ ಫಲವಾಗಿ ತಂಡವು ಎರಡನೇ ದಿನದಾಟದ ಮೊದಲ ಸೆಷನ್ ಮುಕ್ತಾಯಕ್ಕೂ ಮುನ್ನವೇ 115.1 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 603 ರನ್ ಕಲೆಹಾಕಿ ಮೊದಲ ಇನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡಿತ್ತು.
ಇದನ್ನೂ ಓದಿ: ರಾಂಗ್ವೇನಲ್ಲಿ ಕಾರು ಚಾಲನೆ; 7 ಮಂದಿ ಮೃತ್ಯು, ನಾಲ್ವರು ಗಂಭೀರ
ದಕ್ಷಿಣ ಆಫ್ರಿಕಾದ ವಿರುದ್ಧ 603 ರನ್ಗಳನ್ನು ಕಲೆ ಹಾಕುವ ಮೂಲಕ ಹಿಳಾ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿದೆ. ಇದಲ್ಲದೆ ಟೆಸ್ಟ್ ಪಂದ್ಯದ ಮೊದಲ ದಿನವೇ 500ಕ್ಕೂ ಅಧಿಕ ರನ್ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ವನಿತೆಯರು ಈ ಸಾಧನೆ ಮಾಡಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. 2024 ರಲ್ಲಿ ಪರ್ತ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 575 ರನ್ಗಳಿಸಿ ಈ ದಾಖಲೆ ಬರೆದಿತ್ತು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿ ಮಹಿಳಾ ಟೆಸ್ಟ್ನಲ್ಲಿ 600+ ರನ್ ಕಲೆಹಾಕಿದ ಮೊದಲ ತಂಡವೆಂಬ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ನಿರ್ಮಿಸಿದೆ.