

ನವದೆಹಲಿ: ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ನಾಯಿಯೊಂದಕ್ಕೆ ದೆಹಲಿಯ ಪಶುವೈದ್ಯರು ಅಪರೂಪದ ಆಪರೇಷನ್ ಮಾಡಿದ್ದಾರೆ. ಭಾರತದ ಖಾಸಗಿ ಆಸ್ಪತ್ರೆಯಲ್ಲಿ ನಾಯಿಯೊಂದಕ್ಕೆ ಶಸ್ತ್ರಚಿಕಿತ್ಸೆ ಮಾಡಿರುವುದು ಇದೇ ಮೊದಲು ಆಗಿದೆ.
7 ವರ್ಷದ ಬೀಗಲ್ ಜೂಲಿಯೆಟ್ ಎನ್ನುವ ಶ್ವಾನ ಕಳೆದ ಎರಡು ವರ್ಷಗಳಿಂದ ಮಿಟ್ರಲ್ ವಾಲ್ವ್ ಕಾಯಿಲೆಯಿಂದ ಬಳಲುತ್ತಿತ್ತು. ಈ ರೋಗವು ಮಿಟ್ರಲ್ ಕವಾಟದಲ್ಲಿನ ಬದಲಾವಣೆಗಳಿಂದ ಉಂಟಾಗುತ್ತದೆ. ಇದು ಹೃದಯದ ಎಡ ಮೇಲ್ಭಾಗದ ಕೋಣೆಗೆ ರಕ್ತವನ್ನು ಹಿಂತಿರುಗಿಸಲು ಅನುವು ಮಾಡಿಕೊಡುತ್ತದೆ. ರೋಗವು ಮುಂದುವರಿದರೆ, ಹೃದಯವು ನಿಲ್ಲಬಹುದು. ಇಂತಹ ಸಂಕೀರ್ಣ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ನಾಯಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಮೇ 30 ರಂದು ಟ್ರಾನ್ಸ್‌ಕ್ಯಾಥೆಟರ್ ಎಡ್ಜ್-ಟು-ಎಡ್ಜ್ ರಿಪೇರಿ ಹೃದಯ ಶಸ್ತ್ರಚಿಕಿತ್ಸೆ ನಡೆಸಿದರು. ಇದು ಹೈಬ್ರಿಡ್ ಶಸ್ತ್ರಚಿಕಿತ್ಸೆಯಾಗಿದ್ದು, ಮೈಕ್ರೋಸರ್ಜರಿಯಾಗಿದೆ. ಎರಡು ದಿನಗಳ ನಂತರ ನಾಯಿಯನ್ನು ಬಿಡುಗಡೆ ಮಾಡಲಾಯಿತು. ನಾಯಿಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ರೀತಿಯ ಶಸ್ತ್ರಚಿಕಿತ್ಸೆ ಏಷ್ಯಾದಲ್ಲಿ ಮೊದಲ ಬಾರಿಗೆ. ಮಿಟ್ರಲ್ ವಾಲ್ವ್ ಕಾಯಿಲೆಯು ಭಾರತದಲ್ಲಿ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ನಾಯಿಗಳಲ್ಲಿ ಅತ್ಯಂತ ಸಾಮಾನ್ಯವಾದ ಹೃದಯ ಕಾಯಿಲೆಯಾಗಿದೆ. ಈ ಕಾಯಿಲೆಯಿಂದ ಬಳಲುತ್ತಿರುವ ನಾಯಿಗಳು ಸಾಯುವ ಅಪಾಯ ಹೆಚ್ಚು ಎಂದು ವೈದ್ಯರು ಹೇಳುತ್ತಾರೆ.