

ಪಟ್ನಾ: ಕಾಂಗ್ರೆಸ್ ಪಕ್ಷವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರವಾಗಿ ಆತ್ಮಾವಲೋಕನ ಮಾಡಿಕೊಳ್ಳುವುದು ಸೂಕ್ತ. ಪಕ್ಷವು ದೃಢವಾಗಿ ಇಂಡಿಯಾ ಬಣದ ಜೊತೆಗಿದೆ ಎಂದು ಜೆಡಿಯು ತಿಳಿಸಿದೆ.
ಈ ಕುರಿತು ಮಾತನಾಡಿರುವ ಜೆಡಿಯು ಅಧ್ಯಕ್ಷ ಉಮೇಶ್ ಸಿಂಗ್ ಕುಶ್ವಾಹ, ಜೆಡಿಯು ಪಕ್ಷವು ಮತ್ತೆ ಬಿಜೆಪಿ ನೇತೃತ್ವದ ಎನ್ಡಿಎ ಬಣಕ್ಕೆ ಮರಳಲು ಯತ್ನಿಸುತ್ತಿದೆ ಎಂಬ ವದಂತಿಗಳನ್ನು ಅಲ್ಲಗಳೆದಿದ್ದಾರೆ. ಬಿಹಾರದ ಆಡಳಿತಾರೂಢ ಮಹಾಘಟಬಂಧನ್ ಸರ್ಕಾರದಲ್ಲಿ ಎಲ್ಲವೂ ಸರಿ ಇದೆ. ಕೆಲವು ಅಜೆಂಡಾಗಳನ್ನು ಇಟ್ಟುಕೊಂಡು ಮಾಧ್ಯಮಗಳಲ್ಲಿ ವದಂತಿ ಹಬ್ಬಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ನಾನು ನಿನ್ನೆ ಮತ್ತು ಇಂದು ಸಿಎಂ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದೆ. ಅಲ್ಲಿ ಪಕ್ಷ ಎನ್ಡಿಎ ಬಣಕ್ಕೆ ಸೇರುವ ಚರ್ಚೆ ನಡೆದಿಲ್ಲ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಯಲ್ಲಿ ಯಾವುದೇ ಸತ್ಯವಿಲ್ಲ. ಪಕ್ಷದ ಶಾಸಕರನ್ನು ಪಾಟ್ನಾಗೆ ಬರಲು ಸೂಚಿಸಲಾಗಿದೆ ಎಂಬುದೂ ವದಂತಿ ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ಮೈತ್ರಿಕೂಟದ ಪಕ್ಷಗಳಲ್ಲೊಂದಾಗಿರುವ ಕಾಂಗ್ರೆಸ್, ಬಣದ ಇತರೆ ಪಕ್ಷಗಳು ಮತ್ತು ಸೀಟು ಹಂಚಿಕೆ ಬಗ್ಗೆ ಆತ್ಮಾವಲೋಕನ ನಡೆಸಬೇಕು. ನಮ್ಮ ನಾಯಕರಾದ ನಿತೀಶ್ ಕುಮಾರ್ ಅವರು ಸೀಟು ಹಂಚಿಕೆ ಪ್ರಕ್ರಿಯೆ ಆದಷ್ಟು ಬೇಗ ಮುಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಆ ಬಳಿಕ ನಾವು ಲೋಕಸಭಾ ಚುನಾವಣೆ ತಯಾರಿ ಮಾಡಿಕೊಳ್ಳಬಹುದು ಎಂದು ಜೆಡಿಯು ಅಧ್ಯಕ್ಷ ಉಮೇಶ್ ಸಿಂಗ್ ಕುಶ್ವಾಹ ತಿಳಿಸಿದ್ದಾರೆ.