Fire Accident : ಹೈದರಾಬಾದ್ನ ಐತಿಹಾಸಿಕ ಸ್ಮಾರಕ ಚಾರ್ಮಿನಾರ್ ಬಳಿಯಿರುವ ಗುಲ್ಜಾರ್ ಹೌಸ್ ಬಳಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮಕ್ಕಳು ಸೇರಿದಂತೆ 17 ಜನರು ದುರಂತ ಸಾವಿಗೀಡಾಗಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಇನ್ನೂ ಹಲವರು ಸಿಲುಕಿಕೊಂಡಿದ್ದಾರೆ.

ಮೃತರನ್ನು ಪ್ರಹ್ಲಾದ್ (70), ಮುನ್ನಿ (70), ರಾಜೇಂದರ್ (65), ಸುಮಿತ್ರಾ (60), ಹಮ್ಯೆ (7), ಅಭಿಷೇಕ್ (31), ಶೀತಲ್ (35), ಪ್ರಿಯನ್ಸ್ (4), ಇರಾಜ್ (2), ಆರುಷಿ (3), ರಿಷಭ್ (4), ಪ್ರಥಮ್ (1), ಅನುಯನ್ (3), ವರ್ಷಾ (35), ಪಂಕಜ್ (36), ರಜ್ಜಿನಿ (32) ಮತ್ತು ಇದ್ದು (4) ಎಂದು ಗುರುತಿಸಲಾಗಿದೆ. ಇನ್ನು ಕೆಲವು ಮಂದಿಯ ಗುರುತನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ.
ರಕ್ಷಣಾ ತಂಡಗಳು ಇಲ್ಲಿಯವರೆಗೆ 10 ರಿಂದ 15 ಜನರನ್ನು ಯಶಸ್ವಿಯಾಗಿ ರಕ್ಷಿಸಿವೆ. ಸ್ಥಳೀಯ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಪರಿಹಾರ ಕಾರ್ಯಗಳನ್ನು ಸಂಘಟಿಸಲು ಪ್ರಯತ್ನಿಸಿದ್ದಾರೆ.
ಬೆಂಕಿ ಅವಘಡದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ತೆಲಂಗಾಣದ ಹೈದರಾಬಾದ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಂಭವಿಸಿದ ಜೀವಹಾನಿ ತೀವ್ರ ನೋವನ್ನುಂಟು ಮಾಡಿದೆ ಎಂದಿದ್ದಾರೆ. ಮೃತರ ಕುಟುಂಬಗಳಿಗೆ ಮೋದಿ ತಮ್ಮ ತೀವ್ರ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಮೃತರ ಕುಟುಂಬಗಳಿಗೆ ಪಿಎಂಎನ್‌ಆರ್‌ಎಫ್‌ನಿಂದ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ.
Deeply anguished by the loss of lives due to a fire tragedy in Hyderabad, Telangana. Condolences to those who have lost their loved ones. May the injured recover soon.
An ex-gratia of Rs. 2 lakh from PMNRF would be given to the next of kin of each deceased. The injured would be…
— PMO India (@PMOIndia) May 18, 2025
ಇನ್ನು ಕೇಂದ್ರ ಸಚಿವ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಜಿ ಕಿಶನ್ ರೆಡ್ಡಿ, ತೆಲಂಗಾಣ ಸಚಿವ ಪೊನ್ನಂ ಪ್ರಭಾಕರ್ ಜತೆಗೂಡಿ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಚಾರ್ಮಿನಾರ್‌ನ ಮಾಜಿ ಶಾಸಕ ಮತ್ತು ಎಐಎಂಐಎಂ ನಾಯಕಿ ಮುಮ್ತಾಜ್ ಅಹ್ಮದ್ ಖಾನ್ ಕೂಡ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.
ಅಗ್ನಿ ಅವಘಡದ ಬಗ್ಗೆ ಮಾತನಾಡಿದ ತೆಲಂಗಾಣ ಸಚಿವ ಪೊನ್ನಂ ಪ್ರಭಾಕರ್, ಬೆಳಗ್ಗೆ 6 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು ಮತ್ತು ಬೆಳಗ್ಗೆ 6.16 ರ ಹೊತ್ತಿಗೆ ತೆಲಂಗಾಣ ಅಗ್ನಿಶಾಮಕ ದಳದವರು ಸ್ಥಳದಲ್ಲಿ ಹಾಜರಾದರು. ತಕ್ಷಣ ಸ್ಥಳಕ್ಕೆ ಆಗಮಿಸಿ ಎಲ್ಲರನ್ನೂ ಉಳಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಆದರೆ, ದುರದೃಷ್ಟವಶಾತ್, ಬೆಂಕಿ ಅಷ್ಟರಲ್ಲಾಗಲೇ ವ್ಯಾಪಕವಾಗಿ ಹರಡಿತ್ತು. ಪರಿಣಾಮವಾಗಿ ಕಟ್ಟಡದೊಳಗಿನ ಹೆಚ್ಚಿನ ಜನರು ಪ್ರಾಣ ಕಳೆದುಕೊಂಡರು ಎಂದರು.
ಘಟನಾ ಸ್ಥಳದಲ್ಲಿ ಮಾತನಾಡಿದ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ, ಒಂದು ಕುಟುಂಬದ ಒಡೆತನದಲ್ಲಿರುವ ಮುತ್ತಿನ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ನಿಂದಾಗಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಅನೇಕ ಜನರು ಸಾವಿಗೀಡಾಗಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ. ಇಲ್ಲಿ ನಾನು ಯಾರನ್ನೂ ದೂಷಿಸುತ್ತಿಲ್ಲ, ಆದರೆ, ಹೈದರಾಬಾದ್ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿರುವುದರಿಂದ, ಪೊಲೀಸ್, ಪುರಸಭೆ, ಅಗ್ನಿಶಾಮಕ ಮತ್ತು ವಿದ್ಯುತ್ ಇಲಾಖೆಗಳನ್ನು ಬಲಪಡಿಸಬೇಕು ಎಂದರು.
ಘಟನೆಯ ಕುರಿತು ವಿವರವಾದ ಮಾಹಿತಿ ಪಡೆಯಲು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಸಚಿವ ಪೊನ್ನಂ ಪ್ರಭಾಕರ್ ಅವರೊಂದಿಗೆ ಮಾತನಾಡಿದ್ದಾರೆ. ಬೆಂಕಿಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಸಾಂತ್ವನ ಹೇಳಲು ಮುಖ್ಯಮಂತ್ರಿಗಳು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ದುರಂತದಿಂದ ಹಾನಿಗೊಳಗಾದ ಕುಟುಂಬಗಳಿಗೆ ಸಹಾಯ ಮಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳು ಸಚಿವ ಪ್ರಭಾಕರ್ ಅವರಿಗೆ ಸೂಚನೆ ನೀಡಿದ್ದಾರೆ. ಬೆಂಕಿಯಲ್ಲಿ ಗಾಯಗೊಂಡವರಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಆರೈಕೆ ದೊರಕಿಸುವಂತೆ ಸೂಚಿಸಿದ್ದಾರೆ. (ಏಜೆನ್ಸೀಸ್)
ಮದುವೆಯಾದ ಒಂದೇ ವಾರದಲ್ಲಿ ಪತ್ನಿಯನ್ನು ಬರ್ಬರವಾಗಿ ಕೊಂದ ಗಂಡ! ಕಾರಣ ಹೀಗಿದೆ…Husband Kills Wife
ವಿರಾಟ್ ಕೊಹ್ಲಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು: ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಆಗ್ರಹ! Virat Kohli